ಮಾ.10ಕ್ಕೇ ಹೋಳಿಹಬ್ಬ ಆಚರಿಸುತ್ತೇವೆ; ಯುಪಿ ಚುನಾವಣಾ ರ್ಯಾಲಿಯಲ್ಲಿ ಪಿಎಂ ಮೋದಿ ಘೋಷಣೆ

sdfa
Published on

ನವದೆಹಲಿ: ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಎಲ್ಲರೂ ಸೇರಿ ಆಚರಿಸೋಣ. ಐದು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಖಚಿತವಾಗಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಮಾ.10ಕ್ಕೇ ಹೋಳಿ ಹಬ್ಬ ಆಚರಿಸುವುದಾಗಿ ಘೋಷಿಸಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾಗಳಲ್ಲಿ ಸೋಮವಾರ ಮತದಾನ ಶಾಂತಿಯುವಾಗಿ ನಡೆಯಿತು. ಮೂರೂ ರಾಜ್ಯಗಳಲ್ಲಿ ಮತದಾರರು ತಮ್ಮ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಚೆನ್ನಾಗಿ ಆಚರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು.

ಕಾನ್ಪುರ ದೇಹಾಟ್​ನಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಎರಡನೇ ಹಂತದಲ್ಲಿ ಗರಿಷ್ಠ ಮತದಾನವಾಗುತ್ತಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೇರುವುದು ಖಚಿತ. ಪರಿವಾರವಾದಿಗಳನ್ನು ಜನ ಸೋಲಿಸುತ್ತಾರೆ. ಅವರು ಪದೇಪದೆ ಮಿತ್ರಪಕ್ಷಗಳನ್ನು ಬದಲಾಯಿಸುತ್ತಿದ್ದು, ಉತ್ತರ ಪ್ರದೇಶ ಜನರಿಗೆ ಯಾವ ರೀತಿ ಸೇವೆಯನ್ನು ಒದಗಿಸಬಲ್ಲರು? ಈ ಹಿಂದಿನ ಸರ್ಕಾರಗಳೆಲ್ಲವೂ ರಾಜ್ಯದ ಜನರ ಸಂಪತ್ತನ್ನು ಕೊಳ್ಳೆ ಹೊಡೆದಿವೆ. ಈಗ ನಡೆಯುತ್ತಿರುವುದು ಬಣ್ಣಗಳ ಹಬ್ಬ. ಹೋಲಿ ಹಬ್ಬದ ಆಚರಣೆ ಮಾ.10ಕ್ಕೇ ನಡೆಯಲಿದೆ ಎಂದು ಹೇಳಿದರು.

ಮುಸ್ಲಿಮ್ ಮಹಿಳೆಯರಿಗೆ ರಕ್ಷಣೆ: ದಿಢೀರ್ ತ್ರಿವಳಿ ತಲಾಕ್ ವಿರುದ್ಧದ ಕಾನೂನು ಸಾವಿರಾರು ಮುಸ್ಲಿಮ್ ಮಹಿಳೆಯರ ಬದುಕಿಗೆ ಬಲ ತುಂಬಿದೆ. ವಿಚ್ಛೇದನಕ್ಕೆ ಒಳಗಾಗಿ ತೊಂದರೆ ಅನುಭವಿಸುವುದರಿಂದ ಅವರಿಗೆ ರಕ್ಷಣೆಯನ್ನು ಒದಗಿಸಿದೆ. ಉತ್ತರ ಪ್ರದೇಶದಲ್ಲಿ 2017ರಲ್ಲಿ ಪರಿಸ್ಥಿತಿ ಬೇರೆಯೇ ರೀತಿ ಇತ್ತು. ಈಗ ಹಾಗಲ್ಲ. ರಾಜ್ಯದಲ್ಲಿ ಅನೇಕ ಮುಸ್ಲಿಮ್ ಬಾಲಕಿಯರು ಶಾಲೆಗೆ ಹೋಗುತ್ತಿದ್ದಾರೆ. ಯುವತಿಯರು ಕಾಲೇಜಿಗೆ ಹೋಗುತ್ತಿದ್ದಾರೆ. ಬಿಜೆಪಿ ಆಳ್ವಿಕೆಯಲ್ಲಿ ಮುಸ್ಲಿಮ್ ಸಮುದಾಯದ ಹುಡುಗಿಯರು ಸುರಕ್ಷಿತ ಭಾವನೆ ಹೊಂದಿದ್ದಾರೆ ಎಂದು ಪ್ರಧಾನಿ ವಿವರಿಸಿದರು.

ಉತ್ತರಾಖಂಡದಲ್ಲಿ ಸೋಮವಾರ ಮತದಾನದ ವೇಳೆ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಅವರ ಪತ್ನಿ ಗೀತಾ ಕೂಡ ಬಿಜೆಪಿ ಚುನಾವಣ ಚಿಹ್ನೆ ಇರುವ ಶಾಲುಗಳನ್ನು ಧರಿಸಿಕೊಂಡು ಮತಗಟ್ಟೆಗೆ ಭೇಟಿ ನೀಡಿದ್ದರು. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಈ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಹೊರಿಸಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಧಾಮಿ, ನಾವು ಪ್ರಚಾರಕ್ಕೆ ಹೋಗಿಲ್ಲ. ಪ್ರತಿ ಮತಗಟ್ಟೆಯಲ್ಲಿ ಮತದಾನ ಹೇಗೆ ನಡೆಯುತ್ತಿವೆ ಎಂದು ನೋಡಲು ಹೋಗಿದ್ದೆವು ಎಂದು ಸಮಜಾಯಿಷಿ ನೀಡಿದ್ದಾರೆ.

ಸಂವಿಧಾನವೇ ಚಾಲನಾಶಕ್ತಿ: ನವಭಾರತಕ್ಕೆ ಸಂವಿಧಾನವೇ ಚಾಲನಾ ಶಕ್ತಿಯಾಗಿದ್ದು, ಷರಿತ್ ಕಾನೂನು ಅಲ್ಲ. ಅಭಿವೃದ್ಧಿಯೇ ನಮಗೆ ಕಾರ್ಯಸೂಚಿ. ಯಾರ ಓಲೈಕೆಯನ್ನೂ ಇಲ್ಲಿ ಮಾಡಲಾಗುವುದಿಲ್ಲ. ಘಜ್ವಾ ಏ ಹಿಂದ್ (ಭಾರತದ ವಿರುದ್ಧ ಅಂತಿಮ ಗೆಲುವು) ಕನಸು ನನಸಾಗೋದು ಎಂದಿಗೂ ಸಾಧ್ಯವಿಲ್ಲ. ಮತಗಳ ಧ್ರುವೀಕರಣವಾಗಿದ್ದು 80ಡ/ಠ20 ಸಮರ ನಡೆಯುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಎನ್​ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಉತ್ತರಾಖಂಡಕ್ಕೆ ಪ್ರಚಾರಕ್ಕೆ ಹೋಗಿದ್ದೆ. ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಗತಿ ಕಾಣಿಸೋದಕ್ಕೆ ಅಣ್ಣ-ತಂಗಿ ಇಬ್ಬರಿದ್ದರೆ ಸಾಕು. ಅವರು ಅದೇ ಕೆಲಸವನ್ನು ಮಾಡುತ್ತಿದ್ದಾರೆ. ನಾನು ಮನವಿ ಮಾಡಿದ್ದು ಇಷ್ಟೇ - ಉತ್ತರಾಖಂಡದ ಜನರಿಗೆ ಕಾಂಗ್ರೆಸ್ ಪಕ್ಷವನ್ನು ಹೊರೆಯನ್ನಾಗಿ ಮಾಡಬೇಡಿ.

| ಯೋಗಿ ಆದಿತ್ಯನಾಥ ಉತ್ತರ ಪ್ರದೇಶ ಮುಖ್ಯಮಂತ್ರಿ

ನಿರುದ್ಯೋಗ ವಿಚಾರ ರಾಹುಲ್ ವಾಗ್ದಾಳಿ:

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ನಿರುದ್ಯೋಗ ಸಮಸ್ಯೆ, ಕಾಳಧನದ ವಿಚಾರವಾಗಿ ಅವರು ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಮಾತನಾಡುತ್ತಿಲ್ಲ. ನೋಟು ಅಮಾನ್ಯಗೊಳಿಸಿದ್ದರಿಂದ, ಜಿಎಸ್​ಟಿ ಜಾರಿಗೊಳಿಸಿದ್ದರಿಂದ ಲಾಭವಾಗಿದ್ದು ಎರಡು-ಮೂರು ಶತಕೋಟ್ಯಧಿಪತಿಗಳಿಗೆ ಮಾತ್ರ ಎಂದು ಪಂಜಾಬ್​ನಲ್ಲಿ ಪ್ರಚಾರ ಸಭೆಯಲ್ಲಿ ಟೀಕಿಸಿದರು. ಪಂಜಾಬ್ ಚುನಾವಣೆ ನಮ್ಮ ಎದುರಿಗಿದೆ. ಫೆ.20ರಂದು ಮತದಾನ ನಡೆಯಲಿದ್ದು, ಇದು ಸಾಮಾನ್ಯ ಚುನಾವಣೆ ಅಲ್ಲ. ನಿಮ್ಮ ಹೊಸ ಸರ್ಕಾರವನ್ನು ಆಯ್ಕೆ ಮಾಡುವ ಅಧಿಕಾರ ನಿಮ್ಮ ಬಳಿ ಇದೆ. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರಣಜಿತ್ ಚನ್ನಿಗೆ ಬಡವರ ಮನಸ್ಸು ಅರ್ಥವಾಗುತ್ತದೆ. ಅವರ ಸರ್ಕಾರವನ್ನು ಮತ್ತೆ ಆಯ್ಕೆ ಮಾಡಬೇಕು ಎಂದು ರಾಹುಲ್ ಗಾಂಧಿ ಮತದಾರರಲ್ಲಿ ಮನವಿ ಮಾಡಿದರು.

ಮೂರು ರಾಜ್ಯಗಳಲ್ಲಿ ಶಾಂತಿಯುತ ಮತದಾನ:

ಉತ್ತರ ಪ್ರದೇಶದಲ್ಲಿ ಶೇಕಡ 60ಕ್ಕೂ ಹೆಚ್ಚು: ಉತ್ತರ ಪ್ರದೇಶದಲ್ಲಿ ಸೋಮವಾರ ಸಂಜೆ 5 ಗಂಟೆ ತನಕ ಶೇಕಡ 60ಕ್ಕೂ ಹೆಚ್ಚು ಮತದಾನವಾಗಿದೆ. ಎರಡನೇ ಹಂತದಲ್ಲಿ 9 ಜಿಲ್ಲೆಗಳ 55 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಬೆಳಗ್ಗೆ ಏಳು ಗಂಟೆ ಮತದಾನ ಶುರುವಾಗಿದ್ದು ಸಂಜೆ 6 ಗಂಟೆ ತನಕ ಮತದಾನ ನಡೆಯಿತು. ಸಹರಣಪುರ 67.13%, ಬಿಜನೂರು 61.48%, ಮೊರಾದಾಬಾದ್ 64.88%, ಸಂಭಾಲ್ 56.93%, ರಾಮಪುರ 60.30%, ಅಮ್ರೋಹಾ 66.19%, ಬರೇಲಿ 57.88% ಆಗಿದ್ದು, ಒಟ್ಟಾರೆ 60.44% ಮತದಾನವಾಗಿದೆ.

ಉತ್ತರಾಖಂಡದಲ್ಲಿ ಶೇಕಡ 62.50: ಉತ್ತರಾಖಂಡದ 13 ಜಿಲ್ಲೆಗಳ 70 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ಮತದಾನ ಶಾಂತಿಯುತ ವಾಗಿ ನಡೆಯಿತು. ಸಂಜೆ 5 ಗಂಟೆ ತನಕ ಶೇಕಡ 62.50 ಮತದಾನವಾಗಿತ್ತು. ಬೆಳಗ್ಗೆ 8 ಗಂಟೆ ಮತದಾನ ಶುರುವಾಗಿ, ಸಂಜೆ 6 ಗಂಟೆಗೆ ಕೊನೆಗೊಂಡಿದೆ. ಕೆಲವೆಡೆ ಇವಿಎಂ ದೋಷಗಳು ಉಂಟಾಗಿದ್ದರೂ, ಕೂಡಲೆ ಬದಲಾಯಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಗೋವಾದಲ್ಲಿ ಶೇಕಡ 75.29: ಗೋವಾದಲ್ಲಿ 40 ಸ್ಥಾನಗಳಿಗೆ ಸೋಮವಾರ ಮತದಾನ ಶಾಂತಿಯುತವಾಗಿ ನಡೆಯಿತು. ಸಂಜೆ ಮೂರು ಗಂಟೆ ತನಕದ ಮತದಾನ ಪ್ರಮಾಣ ಬಹಿರಂಗವಾಗಿದ್ದು ಶೇಕಡ 75.29 ಮತದಾನವಾಗಿದೆ ಎಂದು ಆಯೋಗ ತಿಳಿಸಿದೆ.

ಬಿಜೆಪಿ ಅಭ್ಯರ್ಥಿ ಕಾರಿನ ಮೇಲೆ ದಾಳಿ:

ಉತ್ತರಪ್ರದೇಶದ ಸಂಭಾಲ್​ನಲ್ಲಿ ಅಸ್ಮೋಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೇಂದ್ರ ಅಲಿಯಾಸ್ ಸಿಂಕು ಅವರ ಕಾರಿನ ಮೇಲೆ ದಾಳಿ ನಡೆಯಿತು. ಅವರು ಮತ್ತು ಅವರ ಬೆಂಬಲಿಗರು ಪೊಲೀಸ್ ಠಾಣೆಯಲ್ಲಿ ರಕ್ಷಣೆ ಪಡೆದರು. ದಾಳಿ ನಡೆದ ಸ್ಥಳದಲ್ಲೇ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net