

ಉತ್ತರಪ್ರದೇಶ: ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬೆಂಗಾವಲು ವಾಹನವು ಶನಿವಾರ (ಫೆ.24) ಲಕ್ನೋದಲ್ಲಿ ಪಲ್ಟಿಯಾಗಿದ್ದು, ಅಪಘಾತದಲ್ಲಿ ಒಂಬತ್ತು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಸಿಎಂ ಯೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡವರಲ್ಲಿ ಐವರು ಪೊಲೀಸ್ ಸಿಬ್ಬಂದಿ ಸೇರಿದ್ದರು ಎಂದು ವರದಿಯಾಗಿದೆ. ಲಕ್ನೋದ ರಸ್ತೆಯ ಮಧ್ಯೆ ಬಿದ್ದಿದ್ದ ಪ್ರಾಣಿಯ ಮೃತದೇಹಕ್ಕೆ ಡಿಕ್ಕಿ ಹೊಡೆದ ಕೂಡಲೇ ವಾಹನ ಪಲ್ಟಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ಸಂಭವಿಸಿದ ತಕ್ಷಣವೇ ಕ್ಷಿಪ್ರ ಸ್ಪಂದನ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ದಾಖಲಿಸಿದೆ.
ಘಟನೆ ಕುರಿತು ಟೀಕಿಸಿದ ಉತ್ತರ ಪ್ರದೇಶದ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, "ಬಿಡಾಡಿ ಪ್ರಾಣಿಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಕಾರಣ ಇಂದು ಸ್ವತಃ ಮುಖ್ಯಮಂತ್ರಿಗಳ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದ್ದು, ಹಲವಾರು ಮಂದಿ ಗಾಯಗೊಂಡಿರುವುದು ವಿಷಾದಕರ ಹಾಗೂ ಆತಂಕಕಾರಿ" ಎಂದು ಟ್ವೀಟ್ ಮಾಡಿದ್ದಾರೆ,(ಏಜೆನ್ಸೀಸ್).