

ಡೆಹ್ರಡೂನ್: ಇತ್ತೀಚೆಗೆ ವಿಶ್ವವಿದ್ಯಾಲಯವೊಂದರ ಕನ್ವೋಕೇಷನ್ ದಿನದ ಫೋಟೋಗಳು ವೈರಲ್ ಆಗಿದ್ದವು. ಉತ್ತರಾಂಚಲ್ ವಿಶ್ವವಿದ್ಯಾಲಯವು ಅದರ ಕನ್ವೋಕೇಷನ್ ದಿನಕ್ಕೆ ವಿದ್ಯಾರ್ಥಿಗಳಿಗೆ ಕಪ್ಪು ಕೋಟು, ಕಪ್ಪು ಹ್ಯಾಟ್ನ ಬದಲಾಗಿ ಕೇಸರಿ ಶಾಲು ಧರಿಸುವಂತೆ ಹೇಳಿತ್ತು ಎಂದು ಫೋಟೋದ ಜತೆ ಮಾಹಿತಿ ಹಂಚಲಾಗಿತ್ತು. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಇದೀಗ ತಿಳಿದುಬಂದಿದೆ.
ವೈರಲ್ ಆದ ಫೋಟೋಗಳು ಉತ್ತರಾಂಚಲ್ ವಿಶ್ವವಿದ್ಯಾಲಯದ್ದೇ. ಆದರೆ ಆ ಫೋಟೋ ಈ ವರ್ಷದ್ದಲ್ಲ. ಕಳೆದ ವರ್ಷ ಫೆಬ್ರವರಿ 29ರಂದು ವಿಶ್ವವಿದ್ಯಾಲಯದಲ್ಲಿ ನಡೆದ ಕಾನ್ವೋಕೇಷನ್ ದಿನದ ಫೋಟೋಗಳವು. ಆ ಫೋಟೋಗಳನ್ನು ವಿವಿ ತನ್ನ ಟ್ವಿಟ್ಟರ್ ಖಾತೆಯಲ್ಲೂ ಹಂಚಿಕೊಂಡಿದೆ. ಆದರೆ ಅಲ್ಲಿ ಕೇವಲ ಕೇಸರಿ ಶಾಲನ್ನು ಧರಿಸಿದ ವಿದ್ಯಾರ್ಥಿಗಳು ಮಾತ್ರವಲ್ಲ, ನೀಲಿ, ಮೆರೂನ್ ಬಣ್ಣದ ಶಾಲುಗಳನ್ನೂ ಧರಿಸಿದ್ದಾರೆ.
ವಿವಿಯ ವಿದ್ಯಾರ್ಥಿಗಳು ಕಾನ್ವೋಕೇಷನ್ಗೆ ಆ ರೀತಿಯ ಡ್ರೆಸ್ ಹಾಕಿದ್ದರು. ಆದರೆ ಕೇಸರಿ ಅಥವಾ ಯಾವುದೇ ಬಣ್ಣವನ್ನು ಹಾಕಬೇಕು ಎಂದು ಆದೇಶವಿರಲಿಲ್ಲ. ಆಯಾ ವಿಭಾಗದವರು ಬಣ್ಣ ನಿರ್ಧರಿಸಿಕೊಂಡು ಬಂದಿದ್ದರು ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)