ಉತ್ತರಾಖಂಡ : ಮುಂದಿನ ಸಿಎಂ ಆಯ್ಕೆಗೆ ಇಂದು ಶಾಸಕರ ಸಭೆ

tirath
Published on

ಡೆಹ್ರಾಡೂನ್​ : ಉತ್ತರಾಖಂಡದ 10 ನೇ ಮುಖ್ಯಮಂತ್ರಿಯಾಗಿದ್ದ ತೀರಥ್​ ಸಿಂಗ್ ರಾವತ್​ ಅವರ ರಾಜೀನಾಮೆಯ ನಂತರ ಇಂದು ಮುಂದಿನ ಸಿಎಂ ಯಾರಾಗಬೇಕೆಂದು ತಿರ್ಮಾನಿಸುವುದಕ್ಕೆ ಡೆಹ್ರಾಡೂನಿನಲ್ಲಿ ಬಿಜೆಪಿ ಶಾಸಕರ ಸಭೆ ನಡೆಯಲಿದೆ. ಮುಂದಿನ ಸಿಎಂಗಿರಿಗೆ ಸೂಚಿಸಲ್ಪಡುತ್ತಿರುವ ಹೆಸರುಗಳೆಂದರೆ, ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ಶಾಸಕರಾದ ಸತ್ಪಾಲ್​ ಮಹರಾಜ್​, ಧನ್​ ಸಿಂಗ್ ರಾವತ್ ಮತ್ತು ಪುಷ್ಕರ್ ಸಿಂಗ್​ ಧಾಮಿ ಎನ್ನಲಾಗಿದೆ.

ತೀರಥ್​ ಸಿಂಗ್​ ಅವರು ನಾಲ್ಕು ತಿಂಗಳ ಕೆಳಗಷ್ಟೆ ಸಿಎಂ ಆಗಿದ್ದರೂ, ಪಕ್ಷದ ರಾಜ್ಯ ಘಟಕದಲ್ಲಿನ ಒಳಜಗಳದಿಂದಾಗಿ ಅವರಿಗೆ ಹುದ್ದೆಯಿಂದ ಕೆಳಗಿಳಿಯುವಂತೆ ಬಿಜಿಪಿ ವರಿಷ್ಠರು ಹೇಳಿದ್ದಾರೆ ಎನ್ನಲಾಗಿದೆ. ಉತ್ತರಾಖಂಡದ ಸಂಸದರಾಗಿದ್ದ ತೀರಥ್ ಸಿಂಗ್ ಮಾರ್ಚ್​ನಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಸೆಪ್ಟೆಂಬರ್​ 10 ರೊಳಗೆ ವಿಧಾನಸಭಾ ಸದಸ್ಯರಾಗಿ ಚುನಾಯಿತರಾಗಬೇಕಿತ್ತು.

ಇನ್ನೇನು ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಬೇಕಾದ ರಾಜ್ಯದಲ್ಲಿ ಈಗ ಸದ್ಯಕ್ಕೆ ಕರೊನಾದಿಂದ ಉಪಚುನಾವಣೆ ನಡೆಸುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿರುವುದು ತೀರಥ್​ ಸಿಂಗ್​ರನ್ನು ಕೈಬಿಡುವ ನಿರ್ಧಾರಕ್ಕೆ ಮತ್ತೊಂದು ಕಾರಣವಾಗಿದೆ ಎನ್ನಲಾಗಿದೆ.

ಬಿಜೆಪಿಯ 57 ಶಾಸಕರು ಪಕ್ಷದ ಕೇಂದ್ರೀಯ ವೀಕ್ಷಕ ಸಚಿವರಾದ ನರೇಂದ್ರ ಸಿಂಗ್ ತೋಮರ್​ ಮತ್ತು ರಾಜ್ಯ ಉಸ್ತುವಾರಿ ದುಷ್ಯಂತ್ ಕುಮಾರ್​ ಗೌತಮ್​ ಅವರ ಉಪಸ್ಥಿತಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಭೆ ಸೇರಲಿದ್ದಾರೆ. ಈ ಸಭೆಯಲ್ಲಿ ಮುಂದಿನ ಸಿಎಂ ಬಗೆಗಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ ಬಿಜೆಪಿ ಮುಖ್ಯಸ್ಥ ಮದನ್​ ಕೌಶಿಕ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net