ಬಿಜೆಪಿ ತೊರೆದು 'ಕೈ' ಸೇರಿದ ಉತ್ತರಾಖಂಡ ಸಚಿವ ಮತ್ತು ಶಾಸಕ ಪುತ್ರ

arya
Published on

ನವದೆಹಲಿ/ಡೆಹ್ರಾಡೂನ್: ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರಾಖಂಡದ ಸಚಿವ ಯಶ್​ಪಾಲ್​ ಆರ್ಯ ಮತ್ತು ಅವರ ಮಗ ಶಾಸಕರಾದ ಸಂಜೀವ್ ಆರ್ಯ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದಾರೆ. ಆರು ಬಾರಿ ಸತತ ಶಾಸಕರೂ, ಪ್ರಮುಖ ದಲಿತ ಮುಖಂಡರೂ ಆಗಿರುವ ಯಶ್​ಪಾಲ್​ ಆರ್ಯ ಅವರ ನಿರ್ಗಮನ ಆಡಳಿತಾರೂಢ ಬಿಜೆಪಿಗೆ ಹಿನ್ನಡೆ ಉಂಟುಮಾಡಬಲ್ಲದು ಎನ್ನಲಾಗಿದೆ.

ಯಶ್​ಪಾಲ್​ ಅವರು ರಾಜ್ಯ ಕಾಂಗ್ರೆಸ್​ನ ಮಾಜಿ ಅಧ್ಯಕ್ಷರಾಗಿದ್ದು, 2017 ರ ವಿಧಾನಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರು ಬಿಜೆಪಿ ಸರ್ಕಾರದ ನಿಕಟಪೂರ್ವ ಸಿಎಂ ಹರೀಶ್​ ರಾವತ್​ ಅವರ ಕಾರ್ಯವಿಧಾನದ ಬಗ್ಗೆ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ಸಿಎಂ ಪುಷ್ಕರ್​ ಧಾಮಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು.

ಇಂದು ಕಾಂಗ್ರೆಸ್​ ಹಿರಿಯ ನಾಯಕರಾದ ಹರೀಶ್ ರಾವತ್ ಮತ್ತು ಕೆ.ಸಿ.ವೇಣುಗೋಪಾಲ್​ ಅವರ ಉಪಸ್ಥಿತಿಯಲ್ಲಿ ತಂದೆ-ಮಗ ಕಾಂಗ್ರೆಸ್​ ಸೇರ್ಪಡೆಯಾದರು. ನಂತರ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಯಶ್​ಪಾಲ್​ ಈಗಷ್ಟೇ ಉತ್ತರಾಖಂಡದ ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net