

ಮುಂಬೈ: ಎರಡನೇ ಮಗುವಿಗೆ ಜನ್ಮ ನೀಡಿದ ನಂತರ ಲಾಕ್ಮೆ ಫ್ಯಾಶನ್ ವೀಕ್ನಲ್ಲಿ ಆಕರ್ಷಕ ಗೌನ್ ಧರಿಸಿ ರಾಂಪ್ ವಾಕ್ ಮಾಡಿದ್ದಾರೆ, ಬಾಲಿವುಡ್ ನಟಿ ಕರೀನಾ ಕಪೂರ್! ಡಿಸೈನರ್ ಗೌರವ್ ಗುಪ್ತ ಅವರ ಬಿಳಿಯ ಹೊಳೆಯುವ ಬಟ್ಟೆಯಲ್ಲಿ ತಯಾರಿಸಿದ ಗೌನಿನಲ್ಲಿ ಎಲ್ಲರ ಮನ ಸೆಳೆದ ಕರೀನಾ, ತಮ್ಮ ಆಯ್ಕೆಗೆ ಬಿಟ್ಟಿದ್ದರೆ, ಕಫ್ತಾನ್ ಧರಿಸಿರುತ್ತಿದ್ದೆ ಎಂದಿದ್ದಾರೆ.
ಕರೀನಾ ಮತ್ತು ಸಾಯಿಫ್ ಅಲಿ ಖಾನ್ ದಂಪತಿಗೆ ತೈಮುರ್ ಮತ್ತು ಜೆಹಂಗೀರ್ ಎಂಬ ಇಬ್ಬರು ಪುತ್ರರಿದ್ದಾರೆ. ಇಬ್ಬರು ಮಕ್ಕಳ ತಾಯಾದ ಮೇಲೂ ತಮ್ಮ ಗ್ಲಾಮರ್ ಲುಕ್ ಉಳಿಸಿಕೊಂಡಿರುವ ಕರೀನಾ, ಭಾನುವಾರ ನಡೆದ ಡಿಸೈನರ್ ಗುಪ್ತಾರ ಫ್ಯಾಶನ್ ಶೋನ ಫೇನಾಲೆಯಲ್ಲಿ 'ಶೋಸ್ಟಾಪರ್' ಆಗಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಟ್ಟೆಯನ್ನು ಟ್ರೆಂಡ್ಗಾಗಿ ಅಲ್ಲ, ಕಂಫರ್ಟ್ಗಾಗಿ ತೊಡುವೆ" ಎಂದಿದ್ದಾರೆ.
ತಮ್ಮ ಎರಡನೇ ಕೂಸು ಗರ್ಭದಲ್ಲಿದ್ದಾಗ ಹೆಚ್ಚು ಸಮಯವನ್ನು ಲೂಸ್ ಫಿಟ್ ನೈಟಿಯಾದ ಕಫ್ತಾನ್ನಲ್ಲೇ ಕಳೆದಿರುವ ಕರೀನಾ, "ನನ್ನ ಮಾತು ನಡೆಯುವ ಹಾಗಿದ್ದರೆ, ನಾನು ಈಗಲೂ ಕಫ್ತಾನ್ನಲ್ಲೇ ಇರುತ್ತಿದ್ದೆ. ಬಹುಶಃ ಮುಂದಿನ ಬಾರಿ ನೀವು ನನ್ನನ್ನು ರನ್ವೇ ಮೇಲೆ ಅದರಲ್ಲೇ ನೋಡುವಿರಿ" ಎಂದು ನಸುನಕ್ಕಿದ್ದಾರೆ.
ಜೊತೆಗೆ, “ನನ್ನ ಫ್ಯಾಶನ್ ಆಯ್ಕೆಗಳು ಯಾವಾಗಲೂ ಕಂಫರ್ಟ್ಗೆ ಸಂಬಂಧಿಸಿದ್ದಾಗಿವೆ - ಅವು ಆಕರ್ಷಕ ಎನಿಸುವ ಕ್ಯಾಶುವಲ್ ಲುಕ್ಸ್ ಹೊಂದಿರುತ್ತವೆ. ಇತ್ತೀಚಿನ ನನ್ನ ಜೀವನದಲ್ಲಿ ಸುಲಭವಾಗಿ ಚೆನ್ನಾಗಿ ಕಾಣುವ ಅಗತ್ಯಕ್ಕೆ ಹೆಚ್ಚು ಮಹತ್ವ ಸಿಕ್ಕಿದೆ. ಕೇವಲ ಟ್ರೆಂಡ್ನಲ್ಲಿದೆ ಅಂತ ನಾನು ಯಾವುದೋ ಬಟ್ಟೆಯನ್ನು ತೊಡುವುದಿಲ್ಲ. ಉದಾಹರಣೆಗೆ, ಈಗಿನ ದಿನಗಳಲ್ಲಿ ನಾನು ಬೈಕರ್ ಶಾರ್ಟ್ಸ್ ತೊಡುತ್ತಿದ್ದೇನೆ.. ಅವರು ಟ್ರೆಂಡಿ ಅಂತಲ್ಲ, ಬಾಂಬೆಯಲ್ಲಿ ಈಗ ತುಂಬಾ ಸೆಖೆ ಇದೆ” ಎಂದು ಕರೀನಾ ಹೇಳಿದ್ದಾರೆ. (ಏಜೆನ್ಸೀಸ್)