

ವಿಜಯವಾಣಿ ಸುದ್ದಿಜಾಲ ಕೋಲಾರ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ನಡೆಸಿ, ಆಡಳಿತ ವಿಭಾಗದ ಅಧಿಕಾರಿಗಳನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಬೆಂಗಳೂರು ಉತ್ತರ ವಿವಿ ಎದುರು ಪ್ರತಿಭಟನೆ ನಡೆಸಿದರು. ಪ್ರಾಂತ ಕಾರ್ಯದರ್ಶಿ ಎಚ್.ಕೆ.ಪ್ರವಿಣ್ ಮಾತನಾಡಿ, ರಾಜ್ಯದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ನಿರ್ವಹಣೆಯಲ್ಲಿ ಸರ್ಕಾರ ಹಾಗೂ ಅಧಿಕಾರಿಗಳಲ್ಲಿ ಬದ್ಧತೆಯ ಕೊರತೆಯಿದೆ. ಇದರಿಂದಾಗಿ ಆಡಳಿತಾತ್ಮಕ ಗೊಂದಲಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯು ಕುಂಠಿತಗೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಉತ್ತರದಾಯಿತ್ವವಿಲ್ಲದ ಆಡಳಿತದ ಕಾರಣ ಹಾಗೂ ಉಪಕುಲಪತಿಗಳು, ಕುಲಸಚಿವರುಗಳ ರ್ನಿಲಕ್ಷ$್ಯದ ಪರಿಣಾಮ ವಿಶ್ವವಿದ್ಯಾಲಯದ ಶೈಕ್ಷಣಿಕ ಆಶಯಗಳಿಗೆ ಧಕ್ಕೆ ಉಂಟಾಗಿ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ ಎಂದು ಆರೋಪಿಸಿದರು.
ವಿಶ್ವವಿದ್ಯಾಲಯದ ಸಮರ್ಪಕ ಆಡಳಿತಕ್ಕೆ ಸರಿಯಾದ ಸಮಯಕ್ಕೆ ಸಿಂಡಿಕೇಟ್ ಸದಸ್ಯರನ್ನು ನೇಮಿಸಬೇಕು. ಹೊಸ ಕಾಲೇಜುಗಳಿಗೆ, ಪದವಿಗಳಿಗೆ ಅವಕಾಶ ನೀಡುವ ಸಂದರ್ಭದಲ್ಲಿ ಮೂಲ ಸೌಕರ್ಯ ಒಳಗೊಂಡಂತೆ ಎಲ್ಲ ನಿಯಮಗಳನ್ನು ಯಾವುದೇ ಸಡಿಲಿಕೆ ಇಲ್ಲದೆ ಅನುಮತಿ ನೀಡಬೇಕು, ಮುಂದೆ ನಡೆಯುವ ಪರೀಕ್ಷೆಗಳಿಗೆ ಕಡ್ಡಾಯವಾಗಿ ವೆಗ್ಕಾಸ್ಟಿಂಗ್ ಅಳವಡಿಸಬೇಕು ಎಂದು ಒತ್ತಾಯಿಸಿದರು.
ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ ಪ್ರವೇಶ ಪರೀಕ್ಷೆಯಲ್ಲಿ ಆಗಿರುವ ಗೊಂದಲಗಳನ್ನು ಸರಿಪಡಿಸಬೇಕು. ಯುಜಿಸಿ ನಿಯಮ ಪಾಲನೆ ಮಾಡದಿರುವುದಕ್ಕೆ ವಿಶ್ವವಿದ್ಯಾಲಯ ಸಮಂಜಸ ಉತ್ತರ ನೀಡಬೇಕು. ಪ್ರವೇಶ ಪ್ರಕ್ರಿಯೆಯಲ್ಲಿ ಸ್ವಜನ ಪಕ್ಷಪಾತ ನಡೆಸಿರುವ ಉಪನ್ಯಾಸಕರು ಹಾಗೂ ಅಧಿಕಾರಿಗಳ ಅಮಾನತು ಮಾಡಬೇಡು ಎಂದು ಪಟ್ಟು ಹಿಡಿದರು. ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ವಿಭಾಗದ ಗೌಪ್ಯತೆ ಕಾಪಾಡದೇ ಸರಿಯಾದ ಸಮಯಕ್ಕೆ ಪರೀಕ್ಷಾ ಮೌಲ್ಯಮಾಪನ ಮತ್ತು ಫಲಿತಾಂಶವನ್ನು ನೀಡದೆ ಇರುವುದು. ವಿದ್ಯಾರ್ಥಿಗಳಿಂದ ಹಣವನ್ನು ಪಡೆದು ಫೇಲಾದವರನ್ನು ಪಾಸ್ ಮಾಡಿರುವ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.