ಸೋಂಕು ಪ್ರಸರಣ ಉತ್ತರ ಕನ್ನಡ ಫಸ್ಟ್: ಪ್ರತಿನಿತ್ಯದ ಪಾಸಿಟಿವಿ ಪ್ರಮಾಣ ಶೇ.46.6

IMG-20210513-WA0002
Published on

-ಸುಭಾಸ ಧೂಪದಹೊಂಡ ಕಾರವಾರ

ದೇಶದಲ್ಲಿ ಕರೊನಾ ಹರಡುವ ಪ್ರಮಾಣ ಇಳಿಕೆಯಾಗಿದೆ ಎಂಬ ವರದಿಗಳು ಬರುತ್ತಿವೆ. ಆದರೆ, ಉತ್ತರ ಕನ್ನಡ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ವೇಗವಾಗಿ ಸೋಂಕು ಹರಡುತ್ತಿದೆ ಎಂದು ಕೇಂದ್ರ ಆರೋಗ್ಯ ಮಂತ್ರಾಲಯದ ವರದಿ ಹೇಳಿದೆ. ಮೇ 5ರಿಂದ 11ರವರೆಗೆ ದೇಶದಲ್ಲಿ ಅತಿ ವೇಗವಾಗಿ ಕೋವಿಡ್ ಹರಡಿದ ಜಿಲ್ಲೆಗಳ ಪಟ್ಟಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದು, ಉತ್ತರ ಕನ್ನಡ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

ಈ ಅವಧಿಯಲ್ಲಿ ಇಡೀ ದೇಶದ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ.21 ರಷ್ಟಿದೆ. ರಾಜ್ಯದಲ್ಲಿ ಶೇ.34.7 ಇದೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಪಾಸಿಟಿವಿಸಿ ಪ್ರಮಾಣ ಶೇ.46.6ಕ್ಕೆ ಏರಿಕೆಯಾಗಿದೆ. ಬಳ್ಳಾರಿ ಶೇ.45.2, ಹಾಸನ ಶೇ.42.1, ಹಾಸನ ಶೇ.43.2, ಮೈಸೂರು ಶೇ.42.2 ಇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿದಿನ 1700 ಟೆಸ್ಟ್ ನಡೆಸಲಾಗುತ್ತಿದ್ದು, 800ರಿಂದ 900 ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ.

10 ದಿನದಲ್ಲಿ 102 ಸಾವು: ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡದಲ್ಲಿ ಜನಸಾಂದ್ರತೆ ಕಡಿಮೆ. ಕರಾವಳಿಯ ಕೆಲವು ಗ್ರಾಮಗಳಲ್ಲಿ ಮಾತ್ರ ಜನಸಂಖ್ಯೆ ಹೆಚ್ಚಿದೆ. ಮಲೆನಾಡಿನ ಹೆಚ್ಚಿನ ಗ್ರಾಮಗಳಲ್ಲಿ ದೂರದೂರದ ಮನೆಗಳಿವೆ. ಆದರೂ ರೋಗ ಹರಡುವ ಪ್ರಮಾಣ ಹೆಚ್ಚಿದೆ. ಸಣ್ಣ ಊರುಗಳಲ್ಲೂ ಪ್ರತಿ ಮನೆಗಳಲ್ಲಿ ಜ್ವರ, ನೆಗಡಿ ಮುಂತಾದ ಕರೊನಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಉತ್ತರ ಕನ್ನಡದ ಆರೋಗ್ಯ ಇಲಾಖೆ ನೀಡುವ ಹೆಲ್ತ್ ಬುಲೆಟಿನ್​ನಂತೆ

ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ 8,938 ಮಂದಿಗೆ ಸೋಂಕು ತಗುಲಿದ್ದು, 102 ಸೋಂಕಿತರು ಮೃತಪಟ್ಟಿದ್ದಾರೆ. ಮೇ 1ರಂದು ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 19,348 ಇತ್ತು. ಬುಧವಾರಕ್ಕೆ 28,956 ಆಗಿದೆ.

* ಆತಂಕಕಾರಿ ಸಂಗತಿಗಳು

- ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಲ್ಲ

- ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಭರ್ತಿ

- ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಇದ್ದರೂ ಚಿಕಿತ್ಸೆಗೆ ತಜ್ಞ ವೈದ್ಯರ ಕೊರತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net