ಮದುವೆಯಾದ ಎರಡೇ ದಿನದಲ್ಲಿ ವಿವಾಹಿತೆ ನೇಣಿಗೆ ಶರಣು: ಕನ್ನಡಿ ಮೇಲಿತ್ತು ಡೆತ್​ನೋಟ್​

Married Woman
Published on

ಲಖನೌ: ಮದುವೆಯಾದ ಎರಡೇ ದಿನದಲ್ಲಿ 21 ವರ್ಷದ ನವವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದ ಛರ್ತ್ವಾಲ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಕುಟೆಸ್ರಾ ಗ್ರಾಮದಲ್ಲಿ ನಡೆದಿರುವುದಾಗಿ ಗುರುವಾರ ಪೊಲೀಸರು ತಿಳಿಸಿದ್ದಾರೆ.

ನೇಹಾ ಮೃತ ವಿವಾಹಿತೆ. ತನ್ನ ಕೊಠಡಿಯಲ್ಲಿ ಸೀಲಿಂಗ್​ ಫ್ಯಾನ್​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಸಂಜೆ ನೇಹಾ ಮೃತದೇಹ ಪತ್ತೆಯಾಗಿದೆ. ಸಾವಿಗೂ ಮುನ್ನ ಕೊಠಡಿಯ ಕನ್ನಡಿಯಲ್ಲಿ ಡೆತ್​ನೋಟ್​​ ಬರೆಯಲಾಗಿದೆ. ಅದರಲ್ಲಿ ನನ್ನ ಅತ್ತೆ ಅಮಾಯಕಳಾಗಿದ್ದು, ನನ್ನ ಸಾವಿಗೆ ಅವರು ಹೊಣೆಯಲ್ಲ ಎಂದು ಉಲ್ಲೇಖಿಸಲಾಗಿದೆ.

ಅಂದಹಾಗೆ ನೇಹಾ ಸಚಿನ್​ (22) ಎಂಬಾತನನ್ನು ಸೋಮವಾರವಷ್ಟೇ ಮದುವೆಯಾಗಿದ್ದಳು. ಬಾಳಿ ಬದುಕಬೇಕಾಗಿದ್ದ ನೇಹಾ ದಿಢೀರ್​ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂಬುದು ಪೋಷಕರನ್ನು ಕಾಡುತ್ತಿದೆ.

ತುಂಬಾ ಹೊತ್ತಾದರೂ ತನ್ನ ಕೊಠಡಿಯಿಂದ ನೇಹಾ ಹೊರಬರದಿದ್ದಾಗ ಅವರ ಅತ್ತೆ ಹೋಗಿ ಬಾಗಿಲ ಬಳಿ ನಿಂತು ನೋಡಿದಾಗ ಆಕೆ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾಹಿತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಮತ್ತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net