

ನವದೆಹಲಿ: ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹಮದಾಬಾದ್ನಲ್ಲಿ ನಡೆದ "ನಮಸ್ತೆ ಟ್ರಂಪ್" ಕಾರ್ಯಕ್ರಮವನ್ನು ಮುಗಿಸಿ ನೇರವಾಗಿ ತಮ್ಮ ಕುಟುಂಬ ಸಮೇತ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್ಮಹಲ್ ಅನ್ನು ಕಣ್ತುಂಬಿಕೊಳ್ಳಲು ಆಗ್ರಾಗೆ ಬಂದಿಳಿದರು.
ಇಂದು ಬೆಳಗ್ಗೆಯಷ್ಟೇ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣಕ್ಕೆ ಪತ್ನಿ ಮೆಲಾನಿಯಾ ಟ್ರಂಪ್, ಪುತ್ರಿ ಇವಾಂಕ ಮತ್ತು ಅಳಿಯ ಜರೇದ್ ಕುಶ್ನರ್ ಹಾಗೂ ಅಮೆರಿಕ ನಿಯೋಗದೊಂದಿಗೆ ಅಧ್ಯಕ್ಷ ಟ್ರಂಪ್ ಬಂದಿಳಿದರು. ಬಳಿಕ ಮೊಟೇರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ತಾಜ್ ಮಹಲ್ ನೋಡುವ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸಿದ್ದರು.
ಅದರಂತೆ ಅಹಮದಾಬಾದ್ನಿಂದ ಕುಟುಂಬ ಸಮೇತ ತೆರಳಿದ ಟ್ರಂಪ್ ಸಂಜೆ 4.20ರ ಹೊತ್ತಿಗೆ ಆಗ್ರಾಗೆ ಬಂದಿಳಿದರು. ಈ ವೇಳೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್ ಮತ್ತು ಮುಖ್ಯಮಂತ್ತಿ ಯೋಗಿ ಆದಿತ್ಯಾ ನಾಥ್ ಟ್ರಂಪ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಸಾಂಪ್ರದಾಯಿಕ ಕಲೆಗಳ ಮೂಲಕ ಟ್ರಂಪ್ ದಂಪತಿಗೆ ಗೌರವ ಸಲ್ಲಿಸಿದರು. ಬಳಿಕ ಕಾರು ಹತ್ತಿ ಟ್ರಂಪ್ ದಂಪತಿ ತಾಜ್ ಮಹಲ್ ಕಡೆ ಹೊರಟರು. (ಏಜೆನ್ಸೀಸ್)