ಸ್ನೇಹಿತನ ಎರಡೂವರೆ ವರ್ಷದ ಮಗಳನ್ನೇ ರೇಪ್​ ಮಾಡಿದ ಪಾಪಿ! ಮರಣದಂಡನೆ ವಿಧಿಸಿದ ನ್ಯಾಯಾಲಯ

rape
Published on

ಲಖನೌ: ಎರಡೂವರೆ ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣದ ವಿಚಾರಣೆ ನಡೆಸಿರುವ ವಿಶೇಷ ಪೊಕ್ಸೊ ನ್ಯಾಯಾಲಯವು ಬುಧವಾರ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

2020ರ ಅಕ್ಟೋಬರ್ 19ಕ್ಕೆ ಉತ್ತರಪ್ರದೇಶದ ಗಾಜಿಯಾಬಾದಿನ ಕಾವಿನಗರ ಪೊಲೀಸ್ ಠಾಣೆಗೆ ತಮ್ಮ ಎರಡೂವರೆ ವರ್ಷದ ಮಗಳು ಕಾಣೆಯಾಗಿರುವುದಾಗಿ ಪಾಲಕರು ದೂರಿತ್ತರು. ಸಂಶಯದ ಮೇಲೆ ತಂದೆಯ ಆಪ್ತ ಸ್ನೇಹಿತ ಚಂದನ್ ಪಾಂಡೆಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದರು. ತನಗೆ ಯಾವುದೇ ಮಾಹಿತಿಯಿಲ್ಲ ಎಂದು ಆರೋಪಿಯು ಪೊಲೀಸರ ದಾರಿತಪ್ಪಿಸುತ್ತಿದ್ದ. ಆದರೆ ಮಾರನೇ ದಿನ ಮಧ್ಯಾಹ್ನ ಮಗುವಿನ ಶವವು ಕವಿನಗರ ಇಂಡಸ್ಟ್ರಿಯಲ್ ಏರಿಯಾದ ಬಳಿ ಮೋರಿ ಬದಿಯ ಪೊದೆಯಲ್ಲಿ ಸಿಕ್ಕಿತು. ನಂತರ ಆರೋಪಿಯು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದ.

ವಿಶೇಷ ಪೊಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಂದ್ರ ಶ್ರೀವಾಸ್ತವ ಅವರ ಮುಂದೆ ವಿಚಾರಣೆಗೆ ಬಂದ ಪ್ರಕರಣದಲ್ಲಿ ಡಿಸೆಂಬರ್ 29 ಕ್ಕೆ ಪೊಲೀಸರು ಆರೋಪಿಯ ಮೇಲೆ ಚಾರ್ಜ್​ಶೀಟ್​ ಫೈಲ್ ಮಾಡಿದ್ದರು. ಹತ್ತು ಸಾಕ್ಷಿಗಳನ್ನು ಹೊಂದಿದ್ದ ಪ್ರಕರಣದ ವಿಚಾರಣೆಯನ್ನು 29 ದಿನಗಳ ದಾಖಲೆ ಸಮಯದಲ್ಲಿ ಪೂರೈಸಿ, ನ್ಯಾಯಾಲಯವು ಆರೋಪಿಗೆ ಮರಣದಂಡನೆ ವಿಧಿಸಿದೆ.

ಹೀಗೆ 29 ದಿನಗಳಲ್ಲೇ ವಿಚಾರಣೆ ಮಾಡಿ ಆದೇಶ ಹೊರಡಿಸಿರುವುದು ಅಭೂತಪೂರ್ವ ಸಾಧನೆಯಾಗಿದೆ ಎಂದು ಸರ್ಕಾರಿ ವಕೀಲರಾದ ಉತ್ಕರ್ಷ್ ವತ್ಸ್ ಹೇಳಿದ್ದಾರೆ. ಸದ್ಯಕ್ಕೆ ಆರೋಪಿಯು ಜಿಲ್ಲೆಯ ದಾಸ್ನಾ ಜೈಲಿನಲ್ಲಿ ಇದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net