

ಕನ್ನೌಜ್: ಹೋಳಿ ಹಬ್ಬದ ರಂಗು ಎಲ್ಲೆಡೆ ಕಳೆಗಟ್ಟಿದೆ. ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ನೌಕರನೊಬ್ಬ ವೇತನ ಕೇಳಲು ಹೋಗಿದ್ದು, ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಿಜೆಪಿ ಮಾಜಿ ಶಾಸಕನ ಮಗನಿಂದಲೇ ಕೊಲೆ ನಡೆದಿರುವುದಾಗಿ ಹೇಳಲಾಗಿದೆ.
ಬಿಜೆಪಿ ಮಾಜಿ ಶಾಸಕ ಬನ್ವಾರಿ ಲಾಲ್ ದೊಹರೆ ಅವರ ಮನೆಯಲ್ಲಿ ಸಂದೇಶ್ ಹೆಸರಿನ ನೌಕರನಿದ್ದ. ಈತ ಪನ್ಬಾದ್ ಗ್ರಾಮದ ನಿವಾಸಿಯಾಗಿದ್ದು, ಬನ್ವಾರಿ ಅವರ ಮನೆಯಲ್ಲಿ ತಿಂಗಳಿಗೆ 5 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ. ಆದರೆ ಕಳೆದ ಆರು ತಿಂಗಳಿನಿಂದ ಸಂದೇಶ್ಗೆ ಸಂಬಳವನ್ನೇ ಕೊಟ್ಟಿರಲಿಲ್ಲವಂತೆ. ಅದರಲ್ಲೂ ಹೋಳಿ ಹಬ್ಬ ಬೇರೆ ಬಂದಿದ್ದರಿಂದಾಗಿ ಸಂದೇಶ್ ಮಾರ್ಚ್ 25ರಂದು ಬನ್ವಾರಿ ಅವರ ಮಗ ಅಜಿತ್ ದೊಹರೆ ಬಳಿ ಸಂಬಳ ಕೇಳಿದ್ದಾನೆ.
ಆದರೆ ಸಂಬಳ ಕೇಳಿದ್ದಕ್ಕೆ ಅಜಿತ್ ಕೋಪಗೊಂಡಿದ್ದಾನೆ. ಸಂದೇಶ್ ಮತ್ತು ಅಜಿತ್ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದ್ದು, ಅಜಿತ್ ಸಂದೇಶನಿಗೆ ಹೊಡೆದಿದ್ದಾನೆ. ಬಂದೂಕಿನಿಂದ ಹಿಂಭಾಗದಿಂದ ಹೊಡೆದ ಹಿನ್ನೆಲೆಯಲ್ಲಿ ಸಂದೇಶ್ ದೇಹದಿಂದ ಸಾಕಷ್ಟು ರಕ್ತ ಹೊರಚಿಮ್ಮಿದೆ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೂರು ದಿನಗಳ ನಂತರ ಕೊನೆಯುಸಿರೆಳೆದಿದ್ದಾನೆ. ಈ ಕುರಿತಾಗಿ ಮೃತನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್)