ಪ್ರಧಾನಿ ಮೋದಿ ವಾರಣಾಸಿ ಭೇಟಿ: 2,200 ಕೋಟಿ ರೂ, ಮೌಲ್ಯದ ಯೋಜನೆಗಳಿಗೆ ಚಾಲನೆ | Narendra Modi

Modi In UP varanasi
Published on

Narendra Modi: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸುಮಾರು 2,200 ಕೋಟಿ ರೂ. ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ (ಅಗಸ್ಟ್ 2) ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

ಪ್ರಧಾನಿಯಾದ ನಂತರ 51ನೇ ಬಾರಿ ವಾರಣಾಸಿಗೆ ಭೇಟಿ ನೀಡಿದ ಮೋದಿ, ಮೋಹನ್ ಸರಾಯ್-ಅಡಲ್ಪುರ ರಸ್ತೆಯಲ್ಲಿನ ಜನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ವಾರಣಾಸಿ-ಭದೋಹಿ ರಸ್ತೆ ಮತ್ತು ಛಿತೌನಿ-ಶೂಲ್ ಟಂಕೇಶ್ವರ್ ರಸ್ತೆಯ ಅಗಲೀಕರಣ ಮತ್ತು ದುರಸ್ತಿ ಹಾಗೂ ಹರ್ದತ್‌ಪುರದಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ಅನ್ನು ಉದ್ಘಾಟಿಸಿದರು.

ದಲ್ಮಂಡಿ, ಲಹರ್ತಾರಾ-ಕೋಟ್ವಾ, ಗಂಗಾಪುರ, ಬಬತ್‌ಪುರ ಸೇರಿದಂತೆ ಹಲವು ಗ್ರಾಮೀಣ ಮತ್ತು ನಗರ ಕಾರಿಡಾರ್‌ಗಳಲ್ಲಿ ಸಮಗ್ರ ರಸ್ತೆ ವಿಸ್ತರಣೆ ಮತ್ತು ದುರಸ್ತಿಗೆ ಮತ್ತು ಲೆವೆಲ್ ಕ್ರಾಸಿಂಗ್ 22ಸಿ ಮತ್ತು ಖಾಲಿಸ್‌ಪುರ ಯಾರ್ಡ್‌ನಲ್ಲಿ ರೈಲ್ವೆ ಓವರ್‌ಬ್ರಿಡ್ಜ್‌ಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು

ಈ ಪ್ರದೇಶದಲ್ಲಿ ವಿದ್ಯುತ್ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಸ್ಮಾರ್ಟ್ ವಿತರಣಾ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಮತ್ತು 880 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿದ್ಯುತ್ ಮೂಲಸೌಕರ್ಯಗಳ ಭೂಗತೀಕರಣಕ್ಕೆ(ಸುರಂಗ) ಶಂಕುಸ್ಥಾಪನೆ ನೆರವೇರಿಸಿದರು.

ಪ್ರವಾಸೋದ್ಯಮಕ್ಕೆ ಆದ್ಯತೆ

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಂಟು ನದಿ ದಂಡೆಯ ಕುಚ್ಚಾ ಘಾಟ್‌ಗಳ ಪುನರಾಭಿವೃದ್ಧಿ ಒತ್ತು ನೀಡಿದ್ದು, ಸಾಂಸ್ಕೃತಿಕವಾಗಿ ಮಹತ್ವದ ಜಲಮೂಲಗಳನ್ನು ಸಂರಕ್ಷಿಸುವುದರ ಜತೆಗೆ, ರಾಮಕುಂಡ್, ಮಂದಾಕಿನಿ, ಶಂಕುಲ್ಧಾರ ಮತ್ತು ಇತರ ಕುಂಡಗಳಲ್ಲಿ ಜಲ ಶುದ್ಧೀಕರಣ ಮತ್ತು ನಿರ್ವಹಣಾ ಕಾರ್ಯಗಳಿಗೆ ಅಡಿಪಾಯ ಹಾಕಿದರು.

ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಎಂಬ ದೃಷ್ಟಿಕೋನವನ್ನು ಮುಂದುವರಿಸುವ ಸಲುವಾಗಿ ಪುರಸಭೆಯ ವ್ಯಾಪ್ತಿಯ 53 ಶಾಲಾ ಕಟ್ಟಡಗಳ ಮೇಲ್ದರ್ಜೆಗೇರಿಸುವಿಕೆಯನ್ನು ಉದ್ಘಾಟಿಸಿದರು. ಹೊಸ ಜಿಲ್ಲಾ ಗ್ರಂಥಾಲಯ ನಿರ್ಮಾಣ ಮತ್ತು ಲಾಲ್‌ಪುರದ ಜಖಿನಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಗಳ ಪುನರುಜ್ಜೀವನ ಸೇರಿದಂತೆ ಹಲವಾರು ಶೈಕ್ಷಣಿಕ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಇದೇ ವೇಳೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತನ್ನು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 20,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು 9.7 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಯಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net