

ಕುಶಿನಗರ: ಮಲಗಿದ್ದ ವೇಳೆ ಗುಡಿಸಲಿಗೆ ಬೆಂಕಿ ಬಿದ್ದು ಐದು ಮಕ್ಕಳು ಸೇರಿ ಆರು ಜನರು ಸುಟ್ಟುಕರಕಲಾಗಿರುವ ದಾರುಣ ಘಟನೆ ಉತ್ತರಪ್ರದೇಶದ ಕುಶಿನಗರದಲ್ಲಿ ನಡೆದಿದೆ.
ಇದನ್ನೂ ಓದಿ: ಜಗತ್ತಿನಲ್ಲೇ ಅತಿ ದೊಡ್ಡ ಕಿಡ್ನಿ ಸ್ಟೋನ್ ತೆಗೆದು ಗಿನ್ನೆಸ್ ದಾಖಲೆ ನಿರ್ಮಿಸಿದ ವೈದ್ಯರು
ಮೃತರನ್ನು ಸಂಗೀತಾ(38), ಮಕ್ಕಳಾದ ಅಂಕಿತ್(10), ಲಕ್ಷ್ಮೀನಾ(9), ರೀಟಾ(3), ಗೀತಾ(2) ಮತ್ತು ಬಾಬು(1) ಎಂದು ಗುರುತಿಸಲಾಗಿದ್ದು, ರಾಮ್ಕೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ಉರ್ಧಾ ಗ್ರಾಮದ ಮನೆಯೊಂದರಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಘಟನೆ ಹಿನ್ನೆಲೆ:
ನವಮಿ ಎಂಬಾತ ರಾತ್ರಿ ಊಟ ಮುಗಿಸಿದ ಬಳಿಕ ಬಿಸಿಲಿನ ಬೇಗೆಯಿಂದ ಬೇಸತ್ತು ಗುಡಿಸಿಲಿನ ಹೊರಗೆ ಮಲಗಿದ್ದ. ಆದರೆ ಈ ವೇಳೆ ಹೊರ ಮಲಗಲು ನಿರಾಕರಿಸಿದ ಪತ್ನಿ ಸಂಗೀತಾ ಹಾಗೂ ಮಕ್ಕಳು ಒಳಗೆ ಮಲಗಿದ್ದರು. ತಡರಾತ್ರಿ ಇದ್ದಕ್ಕಿದ್ದಂತೆ ಗುಡಿಸಲಿಗೆ ಬೆಂಕಿ ಬಿದ್ದಿದೆ. ಕೂಡಲೇ ಹೊರಗಿದ್ದ ನವಮಿಯು ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದನು.
ನೆರೆಹೊರೆಯವರು ಕೂಡ ಆತನ ನೆರವಿಗೆ ಧಾವಿಸಿದರೂ ಸಹಿತ ಬೆಂಕಿಯ ಹತೋಟಿಗೆ ಬಾರದೇ ಒಳಗಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ರಾಮ್ಕೋಲಾ ಪೊಲೀಸರು ಬೆಂಕಿಯನ್ನು ನಂದಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬೆಂಕಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಈ ಕುರಿತು ತನಿಖೆ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್)