ಕೋತಿಗಳ ಹಾವಳಿಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಕರಡಿ ವೇಷದ ಮೊರೆ ಹೋದ ರೈತರು!

Bear costume
Published on

ಲಖನೌ: ಒಂದು ಮಗು ಬೆಳೆದು ದೊಡ್ಡದಾಗುವವರೆಗೂ ಪಾಲಕರು ಎಷ್ಟು ಎಚ್ಚರಿಕೆ ವಹಿಸುತ್ತಾರೋ ಅಷ್ಟೇ ಎಚ್ಚರಿಕೆಯನ್ನು ರೈತ ತನ್ನ ಬೆಳೆಯ ಮೇಲೆ ಇಟ್ಟಿರುತ್ತಾನೆ. ಜೀವನಕ್ಕೆ ಆಧಾರವಾದ ಬೆಳೆಯನ್ನು ಉಳಿಸಿಕೊಳ್ಳಲು ಎದುರಾಗುವ ಎಲ್ಲ ಅಡೆ-ತಡೆಗಳನ್ನು ರೈತ ಹೇಗೆ ಎದುರಿಸುತ್ತಾನೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ನಿದರ್ಶನವಾಗಿದೆ.

ಉತ್ತರ ಪ್ರದೇಶ ಲಖಿಂಪುರ್​ ಖೇರಿ ಜಿಲ್ಲೆಯ ಜಹಾನ್​ ನಗರ ಗ್ರಾಮದ ಯುವ ರೈತನೊಬ್ಬ ತನ್ನ ಕಬ್ಬಿನ ಬೆಳೆಯನ್ನು ಕೋತಿಗಳ ಹಾವಳಿಯಿಂದ ಕಾಪಾಡಿಕೊಳ್ಳಲು ಕರಡಿ ವೇಷ ಧರಿಸಿ ಜಮೀನಿನಲ್ಲಿ ನಿತ್ಯವು ಕುಳಿತುಕೊಳ್ಳುತ್ತಿದ್ದಾನೆ. ಇದು ಓರ್ವ ರೈತನ ಪಾಡಲ್ಲ. ಬದಲಾಗಿ ಅಲ್ಲಿನ ಎಲ್ಲ ರೈತರು ಇದೇ ವಿಧಾನವನ್ನು ಅನುಸರಿಸುತ್ತಿದ್ದಾರೆ.

ಆ ಏರಿಯಾದಲ್ಲಿ ಸುಮಾರು 40 ರಿಂದ 45 ಕೋತಿಗಳು ನಿತ್ಯವು ಅಲೆದಾಡುತ್ತಾ ಬೆಳೆಗಳನ್ನು ನಾಶ ಮಾಡುತ್ತಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರು ಕೂಡ ಈ ಕಡೆ ಗಮನ ಹರಿಸುತ್ತಿಲ್ಲ. ಆದ್ದರಿಂದ ನಾವು ಹಣವನ್ನು ಹೊಂದಿಸಿಕೊಂಡು 4 ಸಾವಿರ ರೂಪಾಯಿಗೆ ಕರಡಿ ವೇಷದ ದಿರಿಸನ್ನು ಖರೀದಿಸಿದ್ದೇವೆ. ಈ ಮೂಲಕ ನಮ್ಮ ಬೆಳೆಗಳನ್ನು ನಾವೇ ಕಾಪಾಡಿಕೊಳ್ಳುತ್ತಿದ್ದೇವೆ ಎಂದು ಗಜೇಂದ್ರ ಸಿಂಗ್​ ಎಂಬ ರೈತ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಲಖೀಂಪುರ್​ ಖೇರಿ ವಲಯ ಅರಣ್ಯಾಧಿಕಾರಿ ಸಂಜಯ್​ ಬೈಸ್ವಾಲ್​, ಬೆಳೆಗಳಿಗೆ ಹಾನಿ ಮಾಡುತ್ತಿರುವ ಕೋತಿಗಳನ್ನು ತಡೆಯಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net