ಕರೊನಾ: ಉತ್ತರ ಪ್ರದೇಶದಲ್ಲಿ 10 ನೇ ತರಗತಿ ಪರೀಕ್ಷೆಗಳು ರದ್ದು, 12 ನೇ ತರಗತಿಗೆ ಒಂದೂವರೆ ಗಂಟೆ ಮಾತ್ರ ಪರೀಕ್ಷೆ

exam
Published on

ಲಕ್ನೋ: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ ಪ್ರದೇಶದ 10 ನೇ ತರಗತಿಯ ಪರೀಕ್ಷೆಗಳನ್ನು (ಬೋರ್ಡ್​ ಎಕ್ಸಾಮ್ಸ್​) ರದ್ದು ಮಾಡಲಾಗಿದೆ.

ಉತ್ತರ ಪ್ರದೇಶ ಸೆಕೆಂಡರಿ ಎಜುಕೇಷನ್ ಕೌನ್ಸಿಲ್ ಈ ನಿರ್ಧಾರ ಪ್ರಕಟಿಸಿದೆ. ಇನ್ನು 12 ನೇ ತರಗತಿ ಪರೀಕ್ಷೆಗಳನ್ನು ಕೇವಲ 90 ನಿಮಿಷ (ಪ್ರತಿ ಪರೀಕ್ಷೆ) ನಡೆಸಲು ತೀರ್ಮಾನಿಸಲಾಗಿದೆ. ಸಾಧ್ಯವಾದರೆ ಜುಲೈನಲ್ಲಿ ಈ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಹತ್ತನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದ್ದರಿಂದ 29.90 ಲಕ್ಷ ವಿದ್ಯಾರ್ಥಿಗಳು ನೇರವಾಗಿ ಮುಂದಿನ ತರಗತಿ ಪ್ರವೇಶಕ್ಕೆ ಅರ್ಹತೆ ಪಡೆಯಲಿದ್ದಾರೆ ಎಂದು ಉತ್ತರ ಪ್ರದೇಶ ಡಿಸಿಎಂ ಸಹ ಆಗಿರುವ ಶಿಕ್ಷಣ ಸಚಿವ ದಿನೇಶ್ ಶರ್ಮಾ ಹೇಳಿದ್ದಾರೆ.

ಕೇಂದ್ರದ ಸಿಬಿಎಸ್​ಸಿ ಕೂಡ ದೇಶಾದ್ಯಂತ ಹತ್ತನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.

ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ಶನಿವಾರ ಹೊಸದಾಗಿ 2204 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. 159 ಜನ ಮೃತಪಟ್ಟಿದ್ದಾರೆ. ಒಟ್ಟು 20 ಸಾವಿರ ಜನ ಮೃತಪಟ್ಟಿದ್ದಾರೆ. ಒಟ್ಟು 16,86,138 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net