

ಬರೇಲಿ: ನಿನ್ನ ಮಗಳನ್ನು ಮದುವೆಯಾಗಿ, ಚೆನ್ನಾಗಿ ನೋಡಿಕೊಳ್ಳುತ್ತೇನೆ.. ನನಗೆ ಹೆಣ್ಣು ಕೊಡಿ ಎಂದು ಕೇಳಿದ್ದಕ್ಕೆ ಯುವತಿಯ ಅಪ್ಪ ಒಪ್ಪಲಿಲ್ಲವೆಂದು ಆತನನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಶ್ರೀಪಾಲ್(28) ಹೆಸರಿನ ವ್ಯಕ್ತಿ ಕೊಲೆ ಮಾಡಿರುವ ಆರೋಪಿ. ಆತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನಂತೆ. ಆಕೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಆತ, ಆಗಾಗ ಅವಳ ಮನೆಗೂ ಹೋಗಿ ಬರುತ್ತಿದ್ದನಂತೆ. ಶನಿವಾರದಂದು ಯುವತಿಯ ಮನೆಗೆ ಹೋದ ಆತ, ನೇರವಾಗಿ ಯುವತಿಯ ಅಪ್ಪನ ಎದುರು ನಿಂತು, ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಎಂದು ಕೇಳಿದ್ದಾನೆ. ಆದರೆ ಇದಕ್ಕೆ ಆತ ಒಪ್ಪಿಲ್ಲ. ಇದರಿಂದಾಗಿ ಅವರಿಬ್ಬರ ನಡುವೆ ಜಗಳವಾಗಿದೆ.
ಯುವತಿಯ ತಂದೆ ಮತ್ತು ಶ್ರೀಪಾಲ್ ನಡುವೆ ಜಗಳ ಹೆಚ್ಚಾಗಿದ್ದು, ಕೋಲೊಂದರಿಂದ ಶ್ರೀಪಾಲ್ ಹಲ್ಲೆ ಮಾಡಲು ಆರಂಭಿಸಿದ್ದಾನೆ. ಮನಸೋಇಚ್ಛೆ ಹಲ್ಲೆ ಮಾಡಿರುವ ಪರಿಣಾಮ ಯುವತಿಯ ತಂದೆ ಅಸು ನೀಗಿದ್ದಾನೆ. ಶ್ರೀಪಾಲ್ ಕುಡಿದು ಬಂದು ಗಲಾಟೆ ಮಾಡಿದ್ದಾಗಿ ಮೃತನ ಸಹೋದರ ದೂರು ನೀಡಿದ್ದಾನೆ. ಇದೀಗ ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)