

ನವದೆಹಲಿ: ಕರೊನಾ ಸೋಂಕಿನ ಅಬ್ಬರ ಮತ್ತೊಮ್ಮೆ ಆರಂಭವಾಗಿದೆ. ಬಹುತೇಕ ಕಡಿಮೆಯಾಗಿದ್ದ ಸೋಂಕು ಮತ್ತೆ ಉಲ್ಬಣಗೊಂಡಿದ್ದು, ಇದೀಗ ಕಳೆದ ಐದು ತಿಂಗಳಲ್ಲೇ ಅತ್ಯಧಿಕ ಏಕದಿನ ಏರಿಕೆ ವರದಿಯಾಗಿದೆ. ಒಂದೇ ದಿನದಲ್ಲಿ 68 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಭಾನುವಾರದಂದು ದೇಶಾದ್ಯಂತ ಒಟ್ಟು 68,020 ಪ್ರಕರಣಗಳು ದೃಢವಾಗಿವೆ. ಅಕ್ಟೋಬರ್ ನಂತರ ದಾಖಲಾದ ಗರಿಷ್ಠ ಏಕದಿನ ಏರಿಕೆ ಇದಾಗಿದೆ. 24 ಗಂಟೆಗಳಲ್ಲಿ 291 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ 35,498 ಏರಿಕೆ ಕಂಡುಬಂದಿದೆ. ದೇಶದ ಒಟ್ಟಾರೆ ಕರೊನಾ ಪ್ರಕರಣಗಳ ಸಂಖ್ಯೆ 1.2 ಕೋಟಿ ದಾಟಿದೆ. ಸಾವಿನ ಸಂಖ್ಯೆ 1,61,843ಕ್ಕೆ ಏರಿದೆ.
ಮಹಾರಾಷ್ಟ್ರವೊಂದರಲ್ಲೇ 24 ಗಂಟೆಗಳಲ್ಲಿ 40,414 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ 108 ಮಂದಿ 24 ಗಂಟೆಗಳಲ್ಲಿ ಸೋಂಕಿನಿಂದಾಗಿ ಸಾವನ್ನಪ್ಪಿರುವುದಾಗಿ ತಿಳಿಸಲಾಗಿದೆ. ಮಹಾರಾಷ್ಟ್ರದ ಜತೆ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿ ಅನೇಕ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಹಲವೆಡೆ ಲಾಕ್ಡೌನ್ ಜಾರಿಗೊಳಿಸಲಾಗಿದೆ. (ಏಜೆನ್ಸೀಸ್)