

ಭೇರ್ಯ: ಸರ್ಕಾರ ನೀಡುವ ವಿಶೇಷ ಸವಲತ್ತುಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಮಹಿಳೆಯರಿಗೆ ಸಲಹೆ ನೀಡಿದರು.
ಸಾಲಿಗ್ರಾಮದ ಶಾದೀಮಾಲ್ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯೆ, ಉದ್ಯೋಗ, ವ್ಯವಹಾರ, ರಾಜಕೀಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮನಾಗಿ ಮೀಸಲಾತಿ ದೊರೆಯುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಗೌರವನ್ವಿತ ಮಹಿಳೆಯರಾಗಿ ಬದುಕಬೇಕು ಎಂದು ಕಿವಿಮಾತು ಹೇಳಿದರು.
ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸಿಮೀತವಾಗಬಾರದು. ಬದಲಾಗಿ ನಿತ್ಯ ಸಂಘ-ಸಂಸ್ಥೆಗಳು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಿಂದುಳಿದಿರುವ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು ಎಂದರು.
ಪಿಡಿಒ ಮಂಜುನಾಥ್, ಗ್ರಾಪಂ ಮಾಜಿ ಉಪಾಧ್ಯಕ್ಷ ಪಿಂಗಿಸ್ವಾಮಿ, ಸಿಆರ್‌ಪಿ ಉಮೇಶ್, ಆರೋಗ್ಯ ಇಲಾಖೆ ಕವಿತಾ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಮಹಿಳಾ ಸಂಘದ ಸದಸ್ಯರು ಇದ್ದರು.