

ಬೆಂಗಳೂರು: ಹೊಸದಾಗಿ ಜಾರಿಗೆ ಬಂದಿರುವ ಕಾಯ್ದೆಗಳ ಬಗ್ಗೆ ಮಾಹಿತಿ ನೀಡುವಂತಹ ‘ಸಂಚಯ’ ಮೊಬೈಲ್ ಅಪ್ಲಿಕೇಷನ್ ಅನ್ನು ಪೊಲೀಸರು ಬಳಕೆ ಮಾಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಆದೇಶಿಸಿದ್ದಾರೆ.
ದೇಶದಲ್ಲಿ ಹೊಸದಾಗಿ ಜಾರಿಗೆ ಬಂದಿರುವ ಕಾಯ್ದೆಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳಲ್ಲಿರುವ ಕಲಂಗಳ ಬಗ್ಗೆ ವಿವರವಾದ ಮಾಹಿತಿಯನ್ನೊಳಗೊಂಡ ‘ಸಂಚಯ’ ಮೊಬೈಲ್ ಅಪ್ಲೀಕೇಷನ್ ಅನ್ನು ಪೊಲೀಸ್ ಗಣಕ ವಿಭಾಗ ಬೆಂಗಳೂರು ವತಿಯಿಂದ ಅಭಿವೃದ್ಧಿ ಪಡಿಸಿದ್ದು, ಇದು ಗೂಗಲ್ ಪ್ಲೇಸ್ಟೋರ್‌ನಲ್ಲಿ ಅಳವಡಿಸಲಾಗಿದ್ದು, ಇದು ಬಳಕೆಗೆ ಲಭ್ಯವಿದೆ. ಈ ಅಪ್ಲಿಕೇಷನ್‌ನಲ್ಲಿ ಹೊಸದಾಗಿ ಜಾರಿಗೆ ಬಂದಿರುವ ಕಾಯ್ದೆಗಳ ವಿವರಗಳನ್ನು ಸವಿಸ್ತಾರವಾಗಿ ನೀಡಲಾಗಿದೆ. ಅಲ್ಲದೇ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಅನುಕೂಲ ಕಲ್ಪಿಸಲು ಹಳೆಯ ಕಾಯ್ದೆಗಳಿಗೆ ಬಳಕೆ ಮಾಡಬೇಕಾಗಿರುವ ಹೊಸ ಕಾಯ್ದೆಗಳ ವಿವರಗಳನ್ನು ನೀಡುವ ಕನ್ವಟರ್‌ನಂತಹ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಇದಲ್ಲದೇ ಕೆಪಿಎ ಮೈಸೂರು ವತಿಯಿಂದ ಪ್ರಕಟಿಸಿರುವ ಹೊಸ ಕಾಯ್ದೆಗಳ ಕನ್ನಡ ಕೈಪಿಡಿಯನ್ನು ಸಹ ಈ ಅಪ್ಲಿಕೇಷನಲ್ಲಿ ಅಳವಡಿಸಲಾಗಿದೆ. ಈ ಸಂಚಯ ಮೊಬೈಲ್ ಅಪ್ಲಿಕೇಷನ್ ಪೊಲೀಸ್ ಇಲಾಖೆಯ ಬಳಕೆ ಮಾತ್ರವಲ್ಲದೇ ಸಾರ್ವಜನಿಕರಿಗೆ, ಸರ್ಕಾರಿ ಅಭಿಯೋಜಕರಿಗೆ ಹಾಗೂ ಕಾನೂನು ವಿದ್ಯಾರ್ಥಿಗಳಿಗೂ ಉಪಯುಕ್ತವಾಗಿದೆ.