

ಮಾತು ಬಲ್ಲವಗೆ ಜಗಳವಿಲ್ಲ, ಊಟ ಬಲ್ಲವಗೆ ರೋಗವಿಲ್ಲ ವೆಂಬುದು ಒಂದು ಹಳೆಯ ಗಾದೆಯಾದರೂ ಇದು ಸಾರ್ವಕಾಲಿಕ ಸತ್ಯ. ಎಲ್ಲರೂ ಮಾತನಾಡುತ್ತಾರೆ; ಆದರೆ ಕೆಲವರಷ್ಟೇ ಸರಿಯಾಗಿ ಮಾತನಾಡುತ್ತಾರೆ. ಚೆನ್ನಾಗಿ ಮಾತನಾಡುತ್ತಾರೆ. ಕಾರಣ ಮಾತು ಬೇರೆ; ಮಾತುಗಾರಿಕೆ ಬೇರೆ. ಏನನ್ನು ಮಾತನಾಡಬೇಕು, ಏನನ್ನು ಮಾತನಾಡಬಾರದು, ಎಲ್ಲಿ ಮಾತನಾಡಬೇಕು, ಎಷ್ಟು ಮಾತನಾಡಬೇಕು ಮತ್ತು ಹೇಗೆ ಮಾತನಾಡಬೇಕೆಂಬ ಪರಿಜ್ಞಾನವೇ ಮಾತುಗಾರಿಕೆ. ಕೆಲವರು ಯೋಚಿಸಿ ಮಾತನಾಡುತ್ತಾರೆ. ಇನ್ನು ಕೆಲವರು ಮಾತನಾಡಿದ ಮೇಲೆ ಯೋಚಿಸುತ್ತಾರೆ. ಆದರೆ ಅಷ್ಟು ಹೊತ್ತಿಗೆ ತಡವಾಗಿರುತ್ತದೆ. ಕಾರಣ ಆಡಿಬಿಟ್ಟ ಮಾತು; ಒಡೆದು ಹೋದ ಮುತ್ತು, ಮತ್ತು ಕಳೆದು ಹೋದ ಸಮಯ ಮರಳಿ ಬಾರದು. ವಿಚಾರ ಮಾಡದೆ ಮಾತನಾಡುವುದೆಂದರೆ ಗುರಿ ಇಡದೆ ಗುಂಡು ಹಾರಿಸಿದಂತೆ. ಕಾಲು ಎಡವಿದರೆ ಆಗುವ ಅಪಾಯಕ್ಕಿಂತ ನಾಲಿಗೆ ಎಡವಿದರೆ ಆಗುವ ಅಪಾಯ ದೊಡ್ಡದು. ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕೆಂಬುದನ್ನು ಅರಿಯದವ ಯಾವ ಸಂದರ್ಭದಲ್ಲಿ ಸುಮ್ಮನೆ ಇರಬೇಕೆಂಬುದನ್ನು ತಿಳಿದಿರುವುದಿಲ್ಲ. ಮಾತು ಮಧುರವಾಗಿದ್ದರೆ ಖಾರದ ಮೆಣಸಿನ ಕಾಯಿಯನ್ನೂ ಸುಲಭದಲ್ಲಿ ಮಾರಬಹುದು. ಮಾತು ಕಟುವಾಗಿದ್ದರೆ ಸಿಹಿಯಾದ ಜೇನುತುಪ್ಪವನ್ನು ಮಾರುವುದೂ ಕಷ್ಟವಾದೀತು!
ನಾವಾಡುವ ಮಾತುಗಳನ್ನು ತೂಕ ಮಾಡಬೇಕೆ ವಿನಹ ಎಣಿಸಬಾರದು. ಮಾತುಗಳನ್ನು ಆಡುವ ಮೊದಲು ಅದರ ಸವಿಯನ್ನು ನಾವೇ ಸವಿದಿರಬೇಕು. ನಮ್ಮ ನುಡಿಗಳು ಕಿಡಿಗಳಾಗಬಾರದು. ಈ ಸತ್ಯವನ್ನೇ ‘ಮೃದುವಚನ ಮೂಲೋಕ ಗೆಲ್ಲುವುದು ತಿಳಿಯೆ’ ಎಂದಿದ್ದಾರೆ ಕವಿ ಚೆನ್ನವೀರ ಕಣವಿಯವರು. ಮನುಷ್ಯನ ಸಂಬಂಧಗಳನ್ನು ಕಟುವಾದ ಮಾತುಗಳು ಹಾಳು ಮಾಡಿದಷ್ಟು ಇನ್ಯಾವುದೂ ಮಾಡಿಲ್ಲ. ಕೆಲವೊಮ್ಮೆ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳಿದ್ದರೂ ಮಾತು ಕಟುವಾಗಿದ್ದಲ್ಲಿ ಅದು ಸಂಬಂಧಗಳಿಗೆ ಮಾರಕವಾಗುವುದುಂಟು. ನಮ್ಮ ಸಂಬಂಧಿಕರಲ್ಲಿ ಸ್ನೇಹಿತರಲ್ಲಿ ಕೆಲವರು ಇರುತ್ತಾರೆ. ಅವರ ಮಾತುಗಳು ಕಟು- ಕಹಿ, ನೇರ- ನಿಷ್ಠುರ. ಇಂತಹವರು ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಒಳಗಿನ ಒಳ್ಳೆಯತನ ಜನರಿಗೆ ಬೇಗ ಅರ್ಥವಾಗುವುದಿಲ್ಲ ಹಾಗೂ ಗೋಚರಿಸುವುದಿಲ್ಲ. ಕೊನೆಗುಳಿಯುವುದು ಅವರಾಡಿದ ಕಹಿ -ಕಟು ಮಾತುಗಳೇ. ಆದುದರಿಂದ ಯಾವಾಗಲೂ ನಮ್ಮ ಮಾತುಗಳು ಪ್ರಿಯವಾಗಿರಬೇಕು. ಅಹಿತಕರ ವಿಷಯಗಳನ್ನು ವ್ಯಕ್ತಪಡಿಸುವಾಗಲೂ ನಮ್ಮ ಮಾತುಗಳು ಕಟುವಾಗಿರಲೇಬೇಕಾದ ಅಗತ್ಯವಿಲ್ಲ. ಮೃದುವಾದ ಮಾತುಗಳಿಂದಲೇ ಅಹಿತಕರವಾದ ಘಟನೆ ಗಳನ್ನು, ವಿಷಯಗಳನ್ನು ವ್ಯಕ್ತಪಡಿಸಲು ಸಾಧ್ಯ. ಇದಕ್ಕೆ ಉದಾಹರಣೆ ಅಕ್ಬರ್ ಮತ್ತು ಬೀರಬಲ್ಲರ ಕಥೆ.
ಒಮ್ಮೆ ಚಕ್ರವರ್ತಿ ಅಕ್ಬರ್ಗೆ ಕೆಟ್ಟ ಕನಸೊಂದು ಬಿತ್ತು. ಅದನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದ ಅಕ್ಬರ್ ತನ್ನ ಆಸ್ಥಾನ ಜ್ಯೋತಿಷಿಯನ್ನು ಕರೆಸಿ, ತಾನು ಕಂಡ ಕನಸಿನ ಅರ್ಥವನ್ನು ತಿಳಿಸುವಂತೆ ಹೇಳುತ್ತಾನೆ. ನೇರ ಸತ್ಯ ಮಾತುಗಳಿಗೆ ಹೆಸರಾದ ಜ್ಯೋತಿಷಿ ನಿಮ್ಮ ಕಣ್ಣೆದುರಿನಲ್ಲಿಯೇ ನಿಮ್ಮ ಆಪ್ತ ಬಂಧು ಬಳಗದವರೆಲ್ಲ ಸಾವನ್ನಪ್ಪುತ್ತಾರೆ ಎಂಬ ಸತ್ಯವನ್ನು ಹೇಳುತ್ತಾನೆ. ಇದರಿಂದ ಕುಪಿತನಾದ ಅಕ್ಬರ್ ಈ ಅಶುಭ ಅಹಿತಕರವಾದ ವಾರ್ತೆಯನ್ನು ಅರುಹಿದ ಜ್ಯೋತಿಷಿಯನ್ನು ಸೆರೆಮನೆಗೆ ಅಟ್ಟುವಂತೆ ಆಜ್ಞಾಪಿಸುತ್ತಾನೆ. ಮತ್ತೆ ಜಾಣ ಬೀರಬಲ್ ಅನ್ನು ಕರೆಸಿ, ಕಂಡ ಕನಸಿನ ಅರ್ಥವನ್ನು ಪುನಃ ಕೇಳಲು ಆತ ಹೇಳುತ್ತಾನೆ: ಪ್ರಭು, ನೀವು ನಿಮ್ಮ ಎಲ್ಲಾ ಬಂಧು ಬಳಗದವರಿಗಿಂತ ದೀರ್ಘಕಾಲ ಬದುಕುವಿರಿ. ಈ ಮಾತುಗಳಿಂದ ಸುಪ್ರೀತನಾದ ಅಕ್ಬರ್, ಬೀರಬಲನಿಗೆ ಬಹುಮಾನ ನೀಡಿ ಸತ್ಕರಿಸುತ್ತಾನೆ. ವಾಸ್ತವದಲ್ಲಿ ಜ್ಯೋತಿಷಿಯಾಗಲಿ ಬೀರಬಲನಾಗಲಿ ಸುಳ್ಳು ಹೇಳಿರಲಿಲ್ಲ. ಇಬ್ಬರೂ ಒಂದೇ ಅರ್ಥ ಇರುವ ಮಾತನ್ನು ಹೇಳಿದ್ದರು. ಆದರೆ ಹೇಳಿದ ರೀತಿ ಬೇರೆ ಬೇರೆಯಾಗಿತ್ತು. ಜ್ಯೋತಿಷಿಯ ಮಾತು ದೊರೆಯ ಮನ ನೋಯುವಂತೆ ಮಾಡಿದರೆ, ಬೀರಬಲನ ಮಾತುಗಳಿಂದ ಚಕ್ರವರ್ತಿಯ ಮನಸ್ಸು ಪುಳಕಿತಗೊಂಡಿತು. ಒಂದು ಪ್ರತ್ಯಕ್ಷದ ಮಾತಾಗಿದ್ದರೆ, ಇನ್ನೊಂದು ಪರೋಕ್ಷದ ಮಾತಾಗಿತ್ತು. ಪರಿಣಾಮ ಒಬ್ಬನಿಗೆ ಶಿಕ್ಷೆಯಾಯಿತು, ಇನ್ನೊಬ್ಬನಿಗೆ ಬಹುಮಾನ ಬಂದಿತು.
ಇದೇ ರೀತಿ ಹೆಚ್ಚಿನವರಿಗೆ ನೀನೊಬ್ಬ ಶುದ್ಧ ಕೋಣ ಎಂದರೆ ತಕ್ಷಣ ಸಿಟ್ಟು ಬರುತ್ತದೆ. ಬದಲಾಗಿ ನೀನೊಬ್ಬ ಎಮ್ಮೆಯ ದೊಡ್ಡ ಅಣ್ಣ ಎಂದರೆ ಅಷ್ಟೊಂದು ಸಿಟ್ಟು ಬರುವುದಿಲ್ಲ. ತಾತ್ಪರ್ಯ ಇಷ್ಟೆ: ಹಿತವಾಗಿ ಮಿತವಾಗಿ ಯೋಚಿಸಿ ಮಾತನಾಡುವವನು ಯಾವಾಗಲೂ ಸುರಕ್ಷಿತನಾಗಿರುತ್ತಾನೆ. ಹಾಗೂ ಎಲ್ಲರಿಗೂ ಪ್ರಿಯವಾಗುತ್ತಾನೆ. ಆದುದರಿಂದಲೇ ಹೇಳಲಾಗಿದೆ - ಆರೋಗ್ಯ ಸಂಪಾದನೆ ಸಾಧ್ಯ ಉತ್ತಮ ಆಹಾರ ಬಲದಿಂದ; ಯಾವುದೇ ಕಲೆಯನ್ನು ಕರಗತ ಮಾಡಿಕೊಳ್ಳಲು ಸಾಧ್ಯ ಸತತ ಅಭ್ಯಾಸ ಬಲದಿಂದ; ಹಣ ಸಂಪಾದನೆ ಸಾಧ್ಯ ಶ್ರಮಬಲದಿಂದ; ಜ್ಞಾನ ಸಂಪಾದನೆ ಸಾಧ್ಯ; ಓದಿನ ಬಲದಿಂದ. ಎಲ್ಲವೂ ಸಾಧ್ಯ ಪ್ರೀತಿಯ ಬಲದಿಂದ, ಮನೋಬಲದಿಂದ. ಆದರೆ ಎಲ್ಲರನ್ನು ಗೆಲ್ಲಲು ಸಾಧ್ಯ ಮಾತಿನ ಬಲದಿಂದ!