ವಿದೇಶಿ ವ್ಯಾಪಾರಕ್ಕೆ ರೂಪಾಯಿ ಬಳಕೆ: 6.9 ಲಕ್ಷ ಕೋಟಿ ರೂ. ವಹಿವಾಟು

Rupee Oil
Published on

ಕಚ್ಚಾ ತೈಲಕ್ಕಾಗಿ ಖರೀದಿಯ ವಹಿವಾಟಿನ ಇತ್ಯರ್ಥಕ್ಕಾಗಿ ಭಾರತೀಯ ರೂಪಾಯಿ ಮತ್ತು ಯುಎಇ ದಿರ್ಹಮ್ ಕರೆನ್ಸಿ ಗಳೆರಡನ್ನೂ ಬಳಸಲಾಗಿದೆ.

ವಿದೇಶಿ ವ್ಯಾಪಾರದಲ್ಲಿ ಡಾಲರ್ ಅವಲಂಬನೆ ತಗ್ಗಿಸಿ ಸ್ಥಳೀಯ ಕರೆನ್ಸಿಗಳ ಮೂಲಕ ವಹಿವಾಟು ನಡೆಸಲು ಮುಂದಾಗಿರುವ ಭಾರತ ಈ ನಿಟ್ಟಿನಲ್ಲಿ ಸಂಯುಕ್ತ ಅರಬ್ ರಾಷ್ಟ್ರ (ಯುಎಇ) ಜತೆ ವಹಿವಾಟುಗಳನ್ನು ಆರಂಭಿಸುವ ಮೂಲಕ ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿ ಇಟ್ಟಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಜುಲೈ 15ರಂದು ಯುಎಇಗೆ ಒಂದು ದಿನದ ಭೇಟಿ ನೀಡಿದ್ದರು. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ, ಗಡಿಯಾಚೆಗಿನ ಹಣ ವರ್ಗಾವಣೆಯನ್ನು ಸುಲಭಗೊಳಿಸಲು ನೈಜ-ಸಮಯದ ಪಾವತಿ ಸಂಪರ್ಕ ಸ್ಥಾಪಿಸಲು ಉಭಯ ದೇಶಗಳು ಒಪ್ಪಿಕೊಂಡಿದ್ದವು. ಅಲ್ಲದೆ, ಭಾರತ- ಯುಎಇ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳನ್ನು ಭಾರತದ ರೂಪಾಯಿ ಹಾಗೂ ಯುಇಎ ದಿರ್ಹಮ್ ಕರೆನ್ಸಿಗಳ ಮೂಲಕ ನಡೆಸುವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದಕ್ಕಾಗಿ ವ್ಯಾಪಾರ ಕಾರ್ಯವಿಧಾನವನ್ನು ಸ್ಥಾಪಿಸಲು ಉಭಯ ದೇಶಗಳ ವೇಗದ ಪಾವತಿ ವ್ಯವಸ್ಥೆಗಳಾದ ಭಾರತದ ಯುಪಿಐ ಮತ್ತು ಯುಎಇಯ ತತ್​ಕ್ಷಣ ಪಾವತಿ ವೇದಿಕೆಯನ್ನು ಬೆಸೆಯುವ ತಿಳಿವಳಿಕೆ ಒಪ್ಪಂದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಯುಎಇಯ ಸೆಂಟ್ರಲ್ ಬ್ಯಾಂಕ್ ಸಹಿ ಹಾಕಿದ್ದವು. ಇದಾದ ಒಂದು ತಿಂಗಳಲ್ಲಿಯೇ ಭಾರತವು ಯುಎಇಯಿಂದ ಆಮದು ಮಾಡಿಕೊಂಡ ಸಾಮಗ್ರಿಗೆ ರೂಪಾಯಿಯ ಮೂಲಕ ಪಾವತಿ ಮಾಡಿದೆ.

ಕಚ್ಚಾ ತೈಲಕ್ಕಾಗಿ ಖರೀದಿಗಾಗಿ ಯುಎಇಗೆ ರೂಪಾಯಿ ಕರೆನ್ಸಿ ಮೂಲಕ ಪಾವತಿ ಕೈಗೊಳ್ಳಲಾಗಿದೆ. ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ (ಎಡಿಎನ್​ಒಸಿ) ಮತ್ತು ಇಂಡಿಯನ್ ಆಯಿಲ್ ಕಾರ್ಪೆರೇಷನ್ ಲಿಮಿಟೆಡ್ (ಐಒಸಿಎಲ್) ಹೊಸದಾಗಿ ಜಾರಿಗೊಳಿಸಲಾದ ಸ್ಥಳೀಯ ಕರೆನ್ಸಿ ಸೆಟಲ್​ವೆುಂಟ್ (ಎಲ್​ಸಿಎಸ್) ಅಡಿಯಲ್ಲಿ ಮೊದಲ ಬಾರಿಗೆ ಕಚ್ಚಾ ತೈಲ ವ್ಯವಹಾರವನ್ನು ಪೂರ್ಣಗೊಳಿಸಿವೆ. ಈ ವ್ಯವಹಾರವು ಅಂದಾಜು 10 ಲಕ್ಷ ಬ್ಯಾರೆಲ್ ಕಚ್ಚಾ ತೈಲದ ಮಾರಾಟವನ್ನು ಒಳಗೊಂಡಿದೆ. ಭಾರತೀಯ ರೂಪಾಯಿಗಳು ಮತ್ತು ಯುಎಇ ದಿರ್ಹಮ್ ಕರೆನ್ಸಿಗಳೆರಡನ್ನೂ ಈ ವಹಿವಾಟಿನ ಇತ್ಯರ್ಥಕ್ಕಾಗಿ ಬಳಸಲಾಗಿದೆ. ರೂಪಾಯಿ- ದಿರ್ಹಮ್ ಕರೆನ್ಸಿ ಬಳಸಿದ ಎರಡನೇ ವಹಿವಾಟು ಇದಾಗಿದೆ. ಇದಕ್ಕೂ ಮೊದಲಿನ ಪ್ರಥಮ ವಹಿವಾಟಿನಲ್ಲಿ ಚಿನ್ನದ ಖರೀದಿ ನಡೆದಿದೆ. ಯುಎಇ ಚಿನ್ನ ರಫ್ತುದಾರರಿಂದ 25 ಕೆಜಿ ಚಿನ್ನವನ್ನು ಭಾರತದಲ್ಲಿನ ಖರೀದಿದಾರರಿಗೆ ಮಾರಾಟ ಮಾಡಲಾಗಿದೆ. ಈ ವಹಿವಾಟಿನ ಮೊತ್ತ 12.84 ಕೋಟಿ ರೂಪಾಯಿ. ಎಲ್​ಸಿಎಸ್ ಕಾರ್ಯವಿಧಾನದ ಕಾರ್ಯಸಾಧ್ಯತೆ ಮತ್ತು ದಕ್ಷತೆಯನ್ನು ಈ ಯಶಸ್ವಿ ಚಿನ್ನದ ವಹಿವಾಟು ತೋರಿಸಿಕೊಟ್ಟಿದೆ ಎಂದೇ ಶ್ಲಾಘಿಸಲಾಗುತ್ತಿದೆ.

6.9 ಲಕ್ಷ ಕೋಟಿ ರೂ. ವಹಿವಾಟು

ಭಾರತ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ವ್ಯಾಪಾರವು 2022-23ನೇ ಹಣಕಾಸು ವರ್ಷದಲ್ಲಿ 84.5 ಶತಕೋಟಿ ಡಾಲರ್ (6,93,225 ಕೋಟಿ ರೂಪಾಯಿ) ತಲುಪಿದೆ. ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರದ ಪ್ರಮುಖ ಭಾಗವಾಗಿವೆ. ಕಳೆದ ವರ್ಷವೊಂದರಲ್ಲೇ ಪೆಟ್ರೋಲಿಯಂ ಉತ್ಪನ್ನಗಳ ವ್ಯಾಪಾರವು 35.10 ಶತಕೋಟಿ ಡಾಲರ್​ನಷ್ಟಿತ್ತು (2,91,569 ಕೋಟಿ ರೂಪಾಯಿ). ಉಭಯ ದೇಶಗಳ ನಡುವಿನ ಒಟ್ಟು ವ್ಯಾಪಾರದ ಶೇಕಡಾ 41.4ರಷ್ಟು ಇದಾಗಿದೆ. ಭಾರತಕ್ಕೆ ಅತಿಹೆಚ್ಚು ಕಚ್ಚಾ ತೈಲ ಪೂರೈಸುವ ದೇಶಗಳ ಪೈಕಿ ಯುಎಇ ನಾಲ್ಕನೇ ಸ್ಥಾನದಲ್ಲಿದೆ. ಅಲ್ಲದೆ, ಅತಿಹೆಚ್ಚು ಎಲ್​ಎನ್​ಜಿ ಮತ್ತು ಎಲ್​ಪಿಜಿ ಪೂರೈಸುವ ಎರಡನೇ ದೇಶವಾಗಿದೆ. ತೈಲ ಸಮೃದ್ಧ ಕೊಲ್ಲಿ ರಾಷ್ಟ್ರಗಳು ತಮಗೆ ಅವಶ್ಯವಿರುವ ಆಹಾರದ ಪೈಕಿ ಶೇಕಡಾ 80-90ರಷ್ಟು ಆಮದು ಮಾಡಿಕೊಳ್ಳುತ್ತವೆ. ಯುಎಇ ತನ್ನ ಆಹಾರ ಅಭದ್ರತೆ ನಿಭಾಯಿಸುವ ನಿಟ್ಟಿನಲ್ಲಿ ಭಾರತದಲ್ಲಿ ಫುಡ್ ಪಾರ್ಕ್​ಗಳನ್ನು ಅಭಿವೃದ್ಧಿಪಡಿಸಲು 2 ಶತಕೋಟಿ ಡಾಲರ್ (16,407 ಕೋಟಿ ರೂಪಾಯಿ) ಹೂಡಿಕೆಯ ವಾಗ್ದಾನ ಮಾಡಿದೆ. 2030ರ ವೇಳೆಗೆ ಪೆಟ್ರೋಲಿಯಂ ಹೊರತುಪಡಿಸಿದ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್​ಗೆ (8,20,385 ಕೋಟಿ ರೂಪಾಯಿ) ಹೆಚ್ಚಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.

ಏನಿದು ಎಲ್​ಸಿಎಸ್?

ಸ್ಥಳೀಯ ಕರೆನ್ಸಿ ಸೆಟಲ್​ವೆುಂಟ್ (ಎಲ್​ಸಿಎಸ್) ವ್ಯವಸ್ಥೆಯು ದ್ವಿಪಕ್ಷೀಯ ಆರ್ಥಿಕ ಸಂಬಂಧದ ಮೇಲೆ ಮಾತ್ರವಲ್ಲದೆ ಪ್ರಪಂಚದಾದ್ಯಂತದ ದೊಡ್ಡ ಆರ್ಥಿಕ ವಹಿವಾಟುಗಳಲ್ಲಿ ಮಹತ್ವದ ಪರಿಣಾಮವನ್ನು ಬೀರಲಿದೆ ಎಂದು ಯುಎಇಯಲ್ಲಿನ ಭಾರತೀಯ ರಾಯಭಾರ ಕಚೇರಿ ಹೇಳಿದೆ. ಕಳೆದ ತಿಂಗಳು ಜುಲೈ 15ರಂದು ಪ್ರಧಾನಿ ನರೇಂದ್ರ ಮೋದಿಯವರು ಯುಎಇಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿನಿಮಯ ಮಾಡಿಕೊಂಡ ತಿಳಿವಳಿಕೆ ಒಪ್ಪಂದದ ಪರಿಣಾಮವಾಗಿ ಎಲ್​ಸಿಎಸ್ ಕಾರ್ಯವಿಧಾನವನ್ನು ಸ್ಥಾಪಿಸಲಾಗಿದೆ. ಈ ಒಪ್ಪಂದವು ವಹಿವಾಟಿನ ವೆಚ್ಚಗಳು ಮತ್ತು ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಅಲ್ಲದೆ, ಗಡಿಯಾಚೆಗಿನ ವಹಿವಾಟುಗಳಿಗೆ ರಾಷ್ಟ್ರೀಯ ಕರೆನ್ಸಿಗಳ ಬಳಕೆಯನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಎಲ್​ಸಿಎಸ್ ಕಾರ್ಯವಿಧಾನವು ವ್ಯಾಪಾರಿಗಳಿಗೆ ಪರಸ್ಪರ ಒಪ್ಪಂದದ ಆಧಾರದ ಮೇಲೆ ಪಾವತಿ ಕರೆನ್ಸಿಯನ್ನು ಆಯ್ಕೆ ಮಾಡಲು ಅವಕಾಶವನ್ನು ಒದಗಿಸುತ್ತದೆ. ಸ್ಥಳೀಯ ಕರೆನ್ಸಿಗಳ ಮೂಲಕ ವಹಿವಾಟುಗಳಲ್ಲಿ ಉಂಟಾಗುವ ಅಸಮತೋಲನವನ್ನು ಕಾರ್ಪೆರೇಟ್ ಬಾಂಡ್​ಗಳು, ಸರ್ಕಾರಿ ಭದ್ರತೆಗಳು ಮತ್ತು ಇಕ್ವಿಟಿ ಮಾರುಕಟ್ಟೆಗಳಂತಹ ವಿವಿಧ ಸ್ಥಳೀಯ ಕರೆನ್ಸಿ ಸ್ವತ್ತುಗಳಲ್ಲಿ ಹೂಡಿಕೆ ಮಾಡುವ ಮೂಲ ಸರಿದೂಗಿಸಲು ಅವಕಾಶ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net