

J&K Government: ಜಮ್ಮು ಮತ್ತು ಕಾಶ್ಮೀರ ಸರ್ಕಾರ ತನ್ನ ಎಲ್ಲಾ ಇಲಾಖೆಗಳಲ್ಲಿ ಪೆನ್ ಡ್ರೈವ್‌ಗಳ ಬಳಕೆ ಮತ್ತು ಸರ್ಕಾರಿ ಸಂವಹನಕ್ಕಾಗಿ ವಾಟ್ಸಾಪ್ ಸಂದೇಶ ಸೇವೆ ಬಳಸುವುದನ್ನು ನಿಷೇಧಿಸಿ ಎಂದು ಸೋಮವಾರ (ಆಗಸ್ಟ್ 25) ವರದಿಯಾಗಿದೆ.
ಮೇ 2025ರಲ್ಲಿ ನಡೆದ ಆಪರೇಷನ್ ಸಿಂಧೂರ ಸಮಯದಲ್ಲಿ ಸೈಬರ್ ದಾಳಿಯಿಂದಾಗಿ ಉಂಟಾದ ಭದ್ರಾ ಉಲ್ಲಂಘನೆಯ ಕಾರಣದಿಂದ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಈ ಕ್ರಮವು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಸೈಬರ್ ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದು, ಸಂವೇದನಾಶೀಲ ಸರ್ಕಾರಿ ಮಾಹಿತಿಯನ್ನು ರಕ್ಷಿಸಲು ಮತ್ತು ಡೇಟಾ ಉಲ್ಲಂಘನೆ, ಮಾಲ್‌ವೇರ್ ಸೋಂಕುಗಳು ಮತ್ತು ಅನಧಿಕೃತ ಪ್ರವೇಶದ ಅಪಾಯವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ ಎನ್ನಲಾಗಿದೆ.
ಈ ಆದೇಶವು ಜಮ್ಮು ಮತ್ತು ಶ್ರೀನಗರದ ಸಿವಿಲ್ ಸೆಕ್ರೆಟೇರಿಯೇಟ್‌ನ ಎಲ್ಲಾ ಆಡಳಿತಾತ್ಮಕ ಇಲಾಖೆಗಳು ಮತ್ತು ಎಲ್ಲಾ ಜಿಲ್ಲೆಗಳ ಡೆಪ್ಯೂಟಿ ಕಮಿಷನರ್ ಕಚೇರಿಗಳಿಗೆ ಅನ್ವಯಿಸುತ್ತದೆ. ವಾಟ್ಸಾಪ್ ಮತ್ತು ಐ ಲವ್ ಪಿಡಿಎಫ್ನಂತಹ ಸಾರ್ವಜನಿಕ ಸಂದೇಶ ಕಳುಹಿಸುವ ವೇದಿಕೆಗಳು ಮತ್ತು ಅಸುರಕ್ಷಿತ ಆನ್‌ಲೈನ್ ಸೇವೆಗಳನ್ನು ಸರ್ಕಾರಿ ಅಥವಾ ಗೌಪ್ಯ ವಸ್ತುಗಳನ್ನು ಸಂಸ್ಕರಿಸಲು, ಹಂಚಿಕೊಳ್ಳಲು ಅಥವಾ ಸಂಗ್ರಹಿಸಲು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಸರ್ಕಾರದ ಎಲ್ಲಾ ಸಂವೇದನಾಶೀಲ ತಾಂತ್ರಿಕ ಮಾಹಿತಿಯನ್ನು ಗೌಪ್ಯವಾಗಿ ವರ್ಗೀಕರಿಸಲು ಮತ್ತು ಗೃಹ ಸಚಿವಾಲಯ (MHA), CERT-In ನಿರ್ದೇಶನಗಳು ಮತ್ತು ಇಲಾಖೆಯ ಡೇಟಾ ವರ್ಗೀಕರಣ ನೀತಿಗಳಿಗೆ ಅನುಗುಣವಾಗಿ ಅಧಿಕೃತ ಸುರಕ್ಷಿತ ಚಾನೆಲ್‌ಗಳ ಮೂಲಕ ಮಾತ್ರ ನಿರ್ವಹಿಸಲು ಆದೇಶಿಸಿದೆ.
ಪೆನ್ ಡ್ರೈವ್‌ಗಳಿಗೆ ಬದಲಾಗಿ, ಸರ್ಕಾರವು ಗವ್‌ಡ್ರೈವ್ ಎಂಬ ಕ್ಲೌಡ್-ಆಧಾರಿತ, ಮಲ್ಟಿ-ಟೆನೆಂಟ್ ವೇದಿಕೆಯನ್ನು ಎಲ್ಲಾ ಇಲಾಖೆಗಳಿಗೆ ಕಡ್ಡಾಯಗೊಳಿಸಿದೆ. ಇದು ಪ್ರತಿ ಸರ್ಕಾರಿ ಅಧಿಕಾರಿಗೆ 50 ಜಿಬಿ ಸುರಕ್ಷಿತ ಸಂಗ್ರಹಣೆಯನ್ನು ಒದಗಿಸುತ್ತದೆ. ಈ ಮೇಲಿನ ನಿರ್ದೇಶನಗಳನ್ನು ಪಾಲಿಸದಿದ್ದರೆ IT ಬಳಕೆ, ಸರ್ಕಾರಿ ಆಡಳಿತ ಮತ್ತು ಶಿಸ್ತಿನ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮಕ್ಕೆ ಒಳಗಾಗುವುದಾಗಿ ಸರ್ಕಾರ ಎಚ್ಚರಿಸಿದೆ. (ಏಜೆನ್ಸೀಸ್)