ದಲಿತರ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ: ಪಿ.ರಾಜೀವ್ ಆರೋಪ | Congress vote bank politics

BJP program
Published on

ಬೆಂಗಳೂರು: ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಿಟ್ಟ ಅನುದಾನದಲ್ಲಿ 25 ಸಾವಿರ ಕೋಟಿ ರೂ.ಗಳು ಕಳೆದ ಎರಡು ವರ್ಷಗಳಲ್ಲಿ ದುರ್ಬಳಕೆಯಾಗಿದೆ. ರಾಜ್ಯ ಸರ್ಕಾರ ಇದಕ್ಕೆ ಸರಿಯಾದ ಕಾರಣ ನೀಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದರು.

ಕೆ.ಆರ್.ಪುರದಲ್ಲಿ ಏರ್ಪಡಿಸಿದ್ದ ‘ಭೀಮ ಸಂಗಮ ಅಭಿಯಾನ’ಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ದಲಿತ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಟ್ಟು ಕಾನೂನು ರಕ್ಷಣೆ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೆ ಹೇಳುತ್ತಿದ್ದಾರೆ.

ಆದರೆ ಹಿಂದಿನ ಎರಡು ವರ್ಷಗಳಲ್ಲಿ 25 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದಕ್ಕೆ ಸಮಜಾಯಿಷಿ ನೀಡುತ್ತಿಲ್ಲ. ಈ ಅನುದಾನದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಅರ್ಹರಿಗೆ ಉದ್ಯಮ-ವ್ಯವಹಾರ, ಸ್ವಾವಲಂಬಿ ಜೀವನಕ್ಕೆ ನೆರವು ನೀಡಲು ಸಾಧ್ಯವಿತ್ತು ಎಂದರು.

ಮತ ಬ್ಯಾಂಕ್ ತಂತ್ರ

ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಡಾ.ಅಂಬೇಡ್ಕರ್ ಅವರ ಸಂವಿಧಾನವನ್ನೇ ಅಮಾನತಿನಲ್ಲಿಟ್ಟರು. ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡ ಕಾಂಗ್ರೆಸ್ ಬೇರೆ ಪಕ್ಷದ ಕಡೆಗೆ ಬೊಟ್ಟು ಮಾಡುತ್ತಿರುವುದು ಹಾಸ್ಯಾಸ್ಪದವೆಂದರು.

ಎಸ್‌ಸಿ, ಎಸ್‌ಟಿ ಸಮುದಾಯದವರು ಬಡವರಾಗಿಯೇ ಇರಬೇಕು. ಹಾಗಿದ್ದರೆ ಮತಬ್ಯಾಂಕ್ ನಂತೆ ಬಳಸಿಕೊಳ್ಳಲು ಸಾಧ್ಯವೆಂಬುದು ಕಾಂಗ್ರೆಸ್‌ನ ಹವಣಿಕೆಯಾಗಿದೆ. ದೀರ್ಘಾವಧಿ ಅಧಿಕಾರದಲ್ಲಿ ಈ ತಂತ್ರವನ್ನು ವ್ಯವಸ್ಥಿತವಾಗಿ ಅನುಸರಿಸಿ, ಲಕ್ಷಾಂತರ ದಲಿತ ಕುಟುಂಬಗಳನ್ನು ವಂಚಿಸಿದೆ ಎಂದು ಪಿ.ರಾಜೀವ್ ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ಬದಲಾವಣೆ ಅಸಾಧ್ಯ

ಮಾಜಿ ಸಚಿವ, ಶಾಸಕ ಬೈರತಿ ಬಸವರಾಜ ಮಾತನಾಡಿ ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನ, ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳಿಗೆ ಬಿಜೆಪಿ ಒತ್ತಾಸೆ ನೀಡಿದ್ದರೆ, ಕಾಂಗ್ರೆಸ್ ಪಕ್ಷ ಅಪಪ್ರಚಾರದ ಮೂಲಕ ದಾರಿ ತಪ್ಪಿಸಲು ಪ್ರಯತ್ನಿಸಿದೆ ಎಂದು ದೂರಿದರು.

ಅಧಿಕಾರ ಲಾಲಸೆ, ಸ್ವಾರ್ಥಕ್ಕೆ ಕಾಂಗ್ರೆಸ್‌ನಿಂದ ಸಂವಿಧಾನಕ್ಕೆ ತಿದ್ದುಪಡಿ, ಡಾ.ಬಿ.ಆರ್.ಅಂಬೇಡ್ಕರ್ ಅಪಮಾನವಾಗಿದ್ದರೆ, ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ಧಾರೆಗೆ ಪೂರಕವಾಗಿ ಬಿಜೆಪಿ ಕೆಲಸ ಮಾಡಿದ್ದನ್ನು ಶೋಷಿತ ಸಮುದಾಯಗಳಿಗೆ ಮನವರಿಕೆ ಮಾಡಿಕೊಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬೈರತಿ ಬಸವರಾಜ ತಿಳಿಸಿದರು.

ಪಕ್ಷದ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್, ಕಾರ್ಯಕ್ರಮದ ಸಂಚಾಲಕ ಮುನಿಕೃಷ್ಣ, ಮುಖಂಡರಾದ ಗೀತಾ ವಿವೇಕಾನಂದ, ರಂಗಸ್ವಾಮಿ, ಸದಾಶಿವ, ಮುಖಂಡರು, ಮಂಡಲ ಪದಾಧಿಕಾರಿಗಳು ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net