

ನವದೆಹಲಿ: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಮೊಬೈಲ್ ಅಪ್ಲಿಕೇಷನ್ವೊಂದರ ಮೊರೆ ಹೋಗಿದ್ದ ಕೇಂದ್ರ ಸರ್ಕಾರ ಈಗ, ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆಯೂ ಅಂಥದ್ದೇ ಒಂದು ಹೆಜ್ಜೆ ಇಟ್ಟಿದೆ.
ಕರೊನಾ ಸೋಂಕಿತರ ಸುಳಿವು ತಿಳಿಯಲು ಆರೋಗ್ಯ ಸೇತುವನ್ನು ರೂಪಿಸಿದ್ದ ಕೇಂದ್ರ ಸರ್ಕಾರ, ಎಲ್ಲರೂ ಅದನ್ನು ಡೌನ್ಲೋಡ್ ಮಾಡಿಕೊಂಡು ಕರೊನಾ ಸೋಂಕು ಹರಡುವಿಕೆ ತಡೆಯುವಲ್ಲಿ ಸಹಕರಿಸಬೇಕು ಎಂದು ಕೋರಿಕೊಂಡಿತ್ತು. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಇಂಥದ್ದೊಂದು ಮನವಿ ಮಾಡಿಕೊಂಡಿದ್ದರು.
ಇದೀಗ ಪರಿಸರ ಮಾಲಿನ್ಯದ ದುಷ್ಪರಿಣಾಮ ತಡೆಯುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಇಲಾಖೆ ಈ ಕ್ರಮ ಅನುಸರಿಸುತ್ತಿದೆ. ಎಲ್ಲರೂ ಮೊಬೈಲ್ಫೋನ್ ಅಪ್ಲಿಕೇಷನ್ 'ಸಮೀರ್'ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಇದು ದೇಶಾದ್ಯಂತ ವಿವಿಧ ನಗರಗಳಲ್ಲಿನ ಪರಿಸರ ಮಾಲಿನ್ಯ ಪ್ರಮಾಣವನ್ನು ತಿಳಿಸುತ್ತದೆ. ಅತಿಹೆಚ್ಚು ಮಾಲಿನ್ಯ ಹೊಂದಿರುವ ಪ್ರದೇಶವನ್ನುಇದು ಕೆಂಪು ಗುರುತಿನ ಮೂಲಕ ತೋರಿಸುತ್ತದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಈ ಮೂಲಕ ಸಾರ್ವಜನಿಕರು ಅಂಥ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಬಹುದು ಅಥವಾ ಸೂಕ್ತ ಮುನ್ನೆಚ್ಚರಿಕೆ ಕಂಡುಕೊಳ್ಳಬಹುದು ಎಂಬುದು ಪರಿಸರ ಇಲಾಖೆಯ ಉದ್ದೇಶವಾಗಿದೆ.