

ಮುಂಬೈ: ದೀಪಾವಳಿ ಹಬ್ಬ ಹಿನ್ನೆಲೆ ಅಪಾರ್ಟ್ಮೆಂಟ್ ಮನೆಯೊಂದನ್ನು ಕ್ಲೀನ್ ಮಾಡಲು ಬಂದ ಸಿಬ್ಬಂದಿ ಬರೋಬ್ಬರಿ 4 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ( Gold Stole ) ದೊಚಿದ ಘಟನೆ ಬೆಳಕಿಗೆ ಬಂದಿದೆ.
ಅರ್ಬಾಜ್ ಖಾನ್ (27) ಎಂಬಾತತನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಕರಣವೊಂದನ್ನು ಉದಾಹರಿಸಿ, ಸೈಬರ್ ಕ್ರೈಮ್ ವಂಚನೆ ಮಾಡುವವರಿದ್ದಾರೆ. ನಿಮ್ಮನ್ನು ಹೆದರಿಸಿ ಡಿಜಿಟಲ್ ಅರೆಸ್ಟ್ ಮಾಡುತ್ತಾರೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಪ್ರಕರಣ ದಾಖಲಾಗಿರುವುದು ಆ್ಯಪ್ಗಳ ಸುರಕ್ಷತೆ ಮತ್ತು ವಿಶ್ವಾಸರ್ಹತೆ ಬಗ್ಗೆ ಕಳವಳವನ್ನು ಎತ್ತಿ ತೋರಿಸುತ್ತದೆ.
ಪ್ರಕರಣದ ಹಿನ್ನೆಲೆ
ಮುಂಬೈನ ದಹಿಸರ್ನಲ್ಲಿರುವ ರಿಷಿಕೇಶ್ ಸೊಸೈಟಿಯಲ್ಲಿ ವಾಸಿಸುತ್ತಿರುವ 55 ವರ್ಷದ ಲೀನಾ ಮಾತ್ರೆ ಎಂಬ ಮಹಿಳೆ, ಅ.21ರಂದು ಹಬ್ಬದ ಸಲುವಾಗಿ ಮನೆ ಕ್ಲೀನ್ ಮಾಡಲು ಆ್ಯಪ್ (NO BROKERS) ಮೂಲಕ ಬುಕ್ ಮಾಡಿ, ಸಿಬ್ಬಂದಿ ಕಳುಹಿಸುವಂತೆ ಕೋರಿದರು. ಈ ಹಿನ್ನೆಲೆ ಮರುದಿನ ಬೆಳಗ್ಗೆ ಮನೆಗೆ ಬಂದ ಸಿಬ್ಬಂದಿ ಮನೆ ಕ್ಲೀನ್ ಮಾಡುವ ಸೋಗಿನಲ್ಲಿ ಚಿನ್ನಾಭರಣ ಎಗರಿಸಿದ್ದಾರೆ. ಮನೆ ಸಾಮಾನುಗಳನ್ನು ಜೋಡಿಸುವಾಗ ಕಳ್ಳತನ ಆಗಿರುವುದು ಲೀನಾ ಅವರ ಅರಿವಿಗೆ ಬಂದಿದೆ. ಬಳಿಕ ಪೊಲೀಸರಿಗೆ ದೂರು ನೀಡಿದರು.
ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ಪ್ಲ್ಯಾಟ್ನ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನು ಆಧರಿಸಿ ಅರ್ಬಾಜ್ ಖಾನ್ ಎಂಬಾತನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಓಂಪ್ರಕಾಶ್ ಯಾದವ್ ಮತ್ತು ಅಹ್ಮದ್ ಸೌದರ್ ಎಂಬವವರನ್ನು ವಶಕ್ಕೆ ಪಡೆದು ಪ್ರಸ್ತುತ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ನೋ ಬ್ರೋಕರ್ ಆ್ಯಪ್ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮುನ್ನ ಆತನ ಹಿನ್ನೆಲೆಯನ್ನು ಪರಿಶೀಲಿಸಿದೆಯೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿ ಸಂದೀಪ್ ಗೋರ್ಡೆ ಮಾತನಾಡಿ, ಖಾಸಗಿ ನಿವಾಸಗಳಿಗೆ ನಿಯೋಜಿಸುವ ಮುನ್ನ ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಎಲ್ಲ ಸೇವಾ ನೌಕರರ ಹಿನ್ನೆಲೆಯನ್ನು ಪೊಲೀಸರು ಪರಿಶೀಲನೆ ಮಾಡಬೇಕಾದ ಅಗತ್ಯವಿದೆ. ಅಲ್ಲದೆ, 'ನೋಬ್ರೋಕರ್' ಕಂಪನಿ ಈ ಉದ್ಯೋಗಿಗಳನ್ನು ನಿಯೋಜಿಸುವ ಮೊದಲು ಅವರ ಪೂರ್ವಾಪರ ವಿಚಾರಿಸಿದೆಯೇ ಎಂಬುದನ್ನು ಸಹ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಗೋರ್ಡೆ ಹೇಳಿದ್ದಾರೆ. (ಏಜೆನೀಸ್)