

ವಾಷಿಂಗ್ಟನ್: ಪ್ರಾದೇಶಿಕ ಮತ್ತು ಜಾಗತಿಕ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬಂದಿರುವ ಭಾರತವನ್ನು ಸ್ವಾಗತಿಸುವುದಾಗಿ ಅಮೆರಿಕ ಹೇಳಿದೆ. ಅಷ್ಟೇ ಅಲ್ಲ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಮುಂದಿನ ಅವಧಿಯಲ್ಲಿ ಭಾರತದ ಜತೆಗೆ ನಿಕಟವಾಗಿ ಕೆಲಸ ಮಾಡುವುದಕ್ಕೂ ಎದುರು ನೋಡುತ್ತಿರುವುದಾಗಿ ಅದು ಹೇಳಿದೆ. ನವದೆಹಲಿಯಲ್ಲಿ 2+2 ಸಚಿವರ ಮಟ್ಟದ ಸಭೆಗೂ ಮುಂಚಿತವಾಗಿ ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ ಈ ಹೇಳಿಕೆಯ ಫ್ಯಾಕ್ಟ್ಶೀಟ್ ಪ್ರಕಟಿಸಿರುವುದು ಗಮನಾರ್ಹ.
ಜಗತ್ತಿನ ಅತಿದೊಡ್ಡ ಮತ್ತು ಹಳೆಯ ಪ್ರಜಾಪ್ರಭುತ್ವಗಳು ಪುರಾತನವಾದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿರುವ ರಾಷ್ಟ್ರಗಳಾಗಿವೆ ಭಾರತ ಮತ್ತು ಅಮೆರಿಕ. ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಬಲಗೊಳ್ಳುತ್ತ ಸಾಗುತ್ತಿದ್ದು, ಅನೇಕ ಮೌಲ್ಯಗಳನ್ನು ಹಂಚಿಕೊಂಡು ಮುನ್ನಡೆಯುತ್ತಿವೆ. ಅಲ್ಲದೆ, ಉಚಿತ- ಮುಕ್ತ ಇಂಡೋ-ಪೆಸಿಫಿಕ್ ಸ್ಥಾಪಿಸುವ ಉದ್ದೇಶದೊಂದಿಗೆ ಕೆಲಸ ಮಾಡುತ್ತಿವೆ ಎಂದು ಅದು ಹೇಳಿದೆ.
ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪಾಂಪಿಯೋ ಮತ್ತು ಡಿಫೆನ್ಸ್ ಸೆಕ್ರಟರಿ ಮಾರ್ಕ್ ಎಸ್ಪರ್ ಅವರು ಇಂದು ಬೆಳಗ್ಗೆಯೇ ನವದೆಹಲಿಗೆ ಆಗಮಿಸಿದ್ದಾರೆ. ಅವರು ಇಂದು ಮತ್ತು ನಾಳೆ ನವದೆಹಲಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ 2+2 ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. (ಏಜೆನ್ಸೀಸ್)