ಅಮೆರಿಕ ತೆರಿಗೆ ಎಫೆಕ್ಟ್ ಸೆನ್ಸೆಕ್ಸ್ ನಿಫ್ಟಿ ಭಾರಿ ಕುಸಿತ

4-67f017e055b96
Published on

ಮುಂಬೈ: ಅಮೆರಿಕ ಘೊಷಿಸಿದ ಪಾರಸ್ಪರಿಕ ತೆರಿಗೆ ಹಿನ್ನೆಲೆಯಲ್ಲಿ ಜಾಗತಿಕ ವ್ಯಾಪಾರ ಸಮರ ಭೀತಿ ತಲೆದೋರಿರುವ ಪರಿಣಾಮ, ವಿವಿಧ ದೇಶಗಳ ಷೇರು ಮಾರುಕಟ್ಟೆಗಳು ಕುಸಿದಿರುವ ನಡುವೆಯೇ ಭಾರತೀಯ ಷೇರುಪೇಟೆಯೂ ಶುಕ್ರವಾರ ತೀವ್ರ ಕುಸಿತಕ್ಕೆ ಸಾಕ್ಷಿಯಾಗಿದೆ.

ದಿನದ ವಹಿವಾಟಿನ ಮಧ್ಯೆ 1,054 ಅಂಕ ಕುಸಿದು 75,240ಕ್ಕೆ ತಲುಪಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 930 ಅಂಕ ಇಳಿಕೆ ದಾಖಲಿಸಿ 75,364ಕ್ಕೆ ಸ್ಥಿರವಾಯಿತು. ನಿಫ್ಟಿ ಕೂಡ ಒಂದು ಹಂತದಲ್ಲಿ 382 ಅಂಕ ಕುಸಿದು 22,867ಕ್ಕೆ ತಲುಪಿತ್ತು. ಕೊನೆಯಲ್ಲಿ 345 ಅಂಕ ಇಳಿಕೆ ದಾಖಲಿಸಿ 22,904ಕ್ಕೆ ಸ್ಥಿರಗೊಂಡಿತು. ಶುಕ್ರವಾರದ ಕುಸಿತದಿಂದ ಹೂಡಿಕೆದಾರರು 10 ಲಕ್ಷ ಕೋಟಿ ರೂ.ನಷ್ಟು ಸಂಪತ್ತು ಕಳೆದುಕೊಂಡಿದ್ದಾರೆ.

ಟಾಟಾ ಸ್ಟೀಲ್ ಷೇರು ಬೆಲೆ ಶೇ. 8.59ರಷ್ಟು ಕುಸಿದು ಭಾರಿ ನಷ್ಟ ಅನುಭವಿಸಿತ್ತು. ಟಾಟಾ ಮೋಟರ್ಸ್, ಎಲ್ ಆಂಡ್ ಟಿ, ಅದಾನಿ ಪೋರ್ಟ್ಸ್, ಇಂಡಸ್​ಇಂಡ್ ಬ್ಯಾಂಕ್, ಟೆಕ್ ಮಹಿಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಸನ್ ಫಾರ್ವ, ಎಚ್​ಸಿಎಲ್ ಟೆಕ್ನಾಲಜೀಸ್, ಟಿಸಿಎಸ್, ಇನ್​ಫೋಸಿಸ್, ಎನ್​ಟಿಪಿಸಿ ಷೇರುಗಳು ನಷ್ಟ ಅನುಭವಿಸಿದವು. ಬಜಾಜ್ ಫೈನಾನ್ಸ್, ಎಚ್​ಡಿಎಫ್​ಸಿ ಬ್ಯಾಂಕ್, ನೆಸ್ಲೆ ಇಂಡಿಯಾ, ಐಸಿಐಸಿಐ ಬ್ಯಾಂಕ್, ಐಟಿಸಿ, ಏಷ್ಯನ್ ಪೇಂಟ್ಸ್, ಆಕ್ಸಿಸ್ ಬ್ಯಾಂಕ್ ಷೇರುಗಳು ಲಾಭದಲ್ಲಿದ್ದವು.

ವಿದೇಶಿ ಷೇರುಪೇಟೆಗಳಲ್ಲಿ ಏನಾಯ್ತು?

ಯೂರೋಪಿಯನ್ ಮತ್ತು ಅಮೆರಿಕದ ಮಾರುಕಟ್ಟೆಗಳು ಭಾರಿ ಪ್ರಮಾಣದ ಕುಸಿತ ದಾಖಲಿಸಿದವು. ಏಷ್ಯಾದ ಮಾರು ಕಟ್ಟೆಗಳ ಪೈಕಿ ಟೋಕಿಯೋ, ಸೋಲ್ ಇಳಿ ಮುಖವಾಗಿದ್ದವು. ಹಾಂಗ್ ಕಾಂಗ್, ಶಾಂಘೈ ಮಾರು ಕಟ್ಟೆಗಳಿಗೆ ರಜೆ ಇತ್ತು. ಕಚ್ಚಾ ತೈಲದ ಜಾಗತಿಕ ಸೂಚ್ಯಂಕ ಬ್ರೆಂಟ್ ಶೇ. 3.26ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್​ಗೆ 67.85 ಡಾಲರ್​ಗೆ ತಲುಪಿತು.

ತೆರಿಗೆ ಶೇ.26ಕ್ಕೆ ಇಳಿಸಿದ ಅಮೆರಿಕ

ನವದೆಹಲಿ: ಭಾರತದ ವಸ್ತುಗಳ ಆಮದಿನ ಮೇಲೆ ವಿಧಿಸಿದ್ದ ಶೇಕಡ 27ರಷ್ಟು ಪಾರಸ್ಪರಿಕ ತೆರಿಗೆಯನ್ನು ಅಮೆರಿಕ ಶುಕ್ರವಾರ ಶೇ. 26ಕ್ಕೆ ಇಳಿಸಿದೆ. ರೆಸಿಪ್ರೋಕಲ್ ಟ್ಯಾರಿಫ್​ಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಘೊಷಣೆ ಮಾಡುವಾಗ ಅವರ ಕೈಯಲ್ಲಿದ್ದ ಪಟ್ಟಿಯಲ್ಲಿ ಭಾರತದ ಮೇಲಿನ ತೆರಿಗೆ ಪ್ರಮಾಣ ಶೇ. 26 ಎಂದೇ ನಮೂದಾಗಿತ್ತು. ಆದರೆ ನಂತರ ಶ್ವೇತಭವನದಲ್ಲಿನ ದಾಖಲೆಗಳ ಅನುಬಂಧಗಳನ್ನು ಪರಿಶೀಲಿಸಿದಾಗ ಅದರಲ್ಲಿ ಭಾರತದ ಮೇಲಿನ ಸುಂಕ ಶೇ. 27 ಎಂಬುದಾಗಿ ನಮೂದಾಗಿತ್ತು. ಅದನ್ನೇ ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಅದನ್ನು ಶೇ. 26ಕ್ಕೆ ಇಳಿಸಲಾಗಿದೆ ಎಂದು ತಿಳಿದುಬಂದಿದೆ.

ಚೀನಾ ಸೇಡಿನ ಕ್ರಮ ಅಮೆರಿಕದ ಮೇಲೆ ಶೇ.34 ಕರಭಾರ

ಬೀಜಿಂಗ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೊಷಿಸಿದ ಪಾರಸ್ಪರಿಕ ತೆರಿಗೆಗೆ ಪ್ರತಿಯಾಗಿ ಆ ರಾಷ್ಟ್ರದ ವಸ್ತುಗಳ ಆಮದಿನ ಮೇಲೆ ಶೇಕಡ 34ರಷ್ಟು ತೆರಿಗೆ ವಿಧಿಸುವ ಮೂಲಕ ಚೀನಾ ಶುಕ್ರವಾರ ಸೇಡು ತೀರಿಸಿಕೊಂಡಿದ್ದು, ಎರಡೂ ದೇಶಗಳ ನಡುವಿನ ವ್ಯಾಪಾರ ಸಮರ ಮತ್ತಷ್ಟು ಉಲ್ಬಣಗೊಂಡಿದೆ. ಅಮೆರಿಕದ ಪಾರಸ್ಪರಿಕ ತೆರಿಗೆ ಜಾರಿಗೆ ಟ್ರಂಪ್ ಏ. 9ರ ಮುಹೂರ್ತ ನಿಗದಿ ಮಾಡಿದ್ದು, ಚೀನಾದ ತೆರಿಗೆ ಏ. 10ರಿಂದ ಜಾರಿಗೆ ಬರಲಿದೆ. ಇದಲ್ಲದೆ, ಅಮೆರಿಕದ ವಿರುದ್ಧ ವಿಶ್ವ ವ್ಯಾಪಾರ ಸಂಘಟನೆಯಲ್ಲಿ (ಡಬ್ಲ್ಯುಟಿಒ) ಚೀನಾ ಮೊಕದ್ದಮೆ ದಾಖಲಿಸಿದೆ. ಅಮೆರಿಕದ 16 ಸಂಸ್ಥೆಗಳಿಗೆ ದ್ವಿ-ಬಳಕೆಯ ವಸ್ತು ರಫ್ತು ಮಾಡುವುದನ್ನೂ ಚೀನಾ ನಿಷೇಧಿಸಿದೆ. ಚೀನಾ ವಸ್ತುಗಳ ಆಮದಿನ ಮೇಲೆ ಟ್ರಂಪ್ ಬುಧವಾರ ಶೇ. 54ರಷ್ಟು ತೆರಿಗೆ ವಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net