

ನ್ಯೂಯಾರ್ಕ್: ನವೆಂಬರ್ 1 ರಿಂದ ಚೀನಾ ಮೇಲೆ ಶೇ. 155 ರಷ್ಟು ಸುಂಕ ವಿಧಿಸುವ ಯೋಜನೆಗಳೊಂದಿಗೆ ತಮ್ಮ ಆಡಳಿತ ಮುಂದುವರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಬುಧವಾರ (ಅಕ್ಟೋಬರ್,22) ದೃಢಪಡಿಸಿದ್ದಾರೆ. ಅಲ್ಲದೆ, ಇದೇ ಸಮಯದಲ್ಲಿ ಟ್ರಂಪ್ ಚೀನಾದೊಂದಿಗೆ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ ಎಂದು ಹೇಳಿದ್ದಾರೆ.
ರಷ್ಯಾದ ಅತಿದೊಡ್ಡ ತೈಲ ಆಮದುದಾರ ಚೀನಾ ವಿರುದ್ಧ ಹೊಸ ಸುಂಕಗಳನ್ನು ವಿಧಿಸುತ್ತಿರಾ ಎಂದು ಕೇಳಿದಾಗ, ಈಗ, ನವೆಂಬರ್ 1 ರಿಂದ ಚೀನಾ ಮೇಲೆ ಸುಮಾರು ಶೇಕಡಾ 155 ರಷ್ಟು ಸುಂಕಗಳನ್ನು ವಿಧಿಸುತ್ತೇವೆ. ಚೀನಾ ಇದನ್ನು ಭರಿಸಬಲ್ಲರು ಎಂದು ನಾನು ಭಾವಿಸುವುದಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಟ್ರಂಪ್, ಅಮೆರಿಕ ದಶಕಗಳಿಂದ ಅನ್ಯಾಯದ ವ್ಯಾಪಾರ ಪದ್ಧತಿಗಳನ್ನು ಸಹಿಸಿಕೊಂಡಿದೆ. ನಾನು ಚೀನಾದೊಂದಿಗೆ ಒಳ್ಳೆಯವನಾಗಿರಲು ಬಯಸುತ್ತೇನೆ. ಆದರೆ, ಚೀನಾ ನಮ್ಮೊಂದಿಗೆ ಬಹಳ ಅಸಭ್ಯವಾಗಿ ವರ್ತಿಸುತ್ತಿದೆ. ಏಕೆಂದರೆ ವ್ಯವಹಾರ ದೃಷ್ಟಿಕೋನದಿಂದ ಹೆಚ್ಚು ಬುದ್ಧಿವಂತರಲ್ಲದ ಅಧ್ಯಕ್ಷರನ್ನು ನಾವು ಹೊಂದಿದ್ದೇವೆ. ಚೀನಾ ಮತ್ತು ಇತರ ಎಲ್ಲಾ ದೇಶಗಳು ನಮ್ಮ ಲಾಭ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಟ್ರಂಪ್ ಕಿಡಿಕಾರಿದ್ದಾರೆ.
ಯುರೋಪಿಯನ್ ಒಕ್ಕೂಟ, ಜಪಾನ್ ಮತ್ತು ದಕ್ಷಿಣ ಕೊರಿಯಾದೊಂದಿಗಿನ ತನ್ನ ಎಲ್ಲಾ ವ್ಯಾಪಾರ ಒಪ್ಪಂದಗಳು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಾದ ಸುಂಕಗಳ ಪ್ರಭಾವದ ಅಡಿಯಲ್ಲಿ ಮಾತುಕತೆ ನಡೆಸಲ್ಪಟ್ಟವು ಎಂದು ಟ್ರಂಪ್ ಹೇಳಿದ್ದಾರೆ.
ನಾನು ಯುರೋಪಿಯನ್ ಒಕ್ಕೂಟದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಅಲ್ಲದೆ, ಜಪಾನ್ ಮತ್ತು ದಕ್ಷಿಣ ಕೊರಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಈ ಒಪ್ಪಂದಗಳಲ್ಲಿ ಹಲವು ಉತ್ತಮವಾಗಿವೆ. ನಾವು ನೂರಾರು ಶತಕೋಟಿ ಡಾಲರ್‌ಗಳು, ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಅಮೆರಿಕಕ್ಕೆ ಪಡೆಯುತ್ತೇವೆ. ನಾವು ಸಾಲವನ್ನು ಪಾವತಿಸಲು ಪ್ರಾರಂಭಿಸಲಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ಪ್ರಸ್ತುತ ಪಾವತಿಸುತ್ತಿರುವ ಸುಂಕಗಳ ಜೊತೆಗೆ ನವೆಂಬರ್ 1 ರಿಂದ ಜಾರಿಗೆ ಬರುವಂತೆ ಚೀನಾದ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ 100 ಪ್ರತಿಶತ ಸುಂಕವನ್ನು ವಿಧಿಸುವುದಾಗಿ ಟ್ರಂಪ್ ಘೋಷಿಸಿದರು. ಬೀಜಿಂಗ್‌ನ ಅಸಾಮಾನ್ಯ ಆಕ್ರಮಣಕಾರಿ ವ್ಯಾಪಾರ ನಿಲುವಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಈ ಬಗ್ಗೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಚೀನಾ ವ್ಯಾಪಾರದ ಮೇಲೆ ಅಸಾಮಾನ್ಯವಾಗಿ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡಿದೆ ಎಂದು ಈಗ ತಿಳಿದುಬಂದಿದೆ. ನವೆಂಬರ್ 1 ರಿಂದ ಜಾರಿಗೆ ಬರುವಂತೆ ಜಗತ್ತಿಗೆ ಅತ್ಯಂತ ಪ್ರತಿಕೂಲ ಪತ್ರವನ್ನು ಕಳುಹಿಸಲಾಗಿದೆ. ಚೀನಾ ತಯಾರಿಸುವ ಎಲ್ಲಾ ಉತ್ಪನ್ನಗಳ ಮೇಲೆ ಮತ್ತು ತಯಾರಿಸದ ಕೆಲವು ಉತ್ಪನ್ನಗಳ ಮೇಲೆಯೂ ಸಹ ಭಾರಿ ರಫ್ತು ನಿರ್ಬಂಧಗಳನ್ನು ವಿಧಿಸಲಿದ್ದಾರೆ ಎಂದು ಇದು ಹೇಳುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)