Bihar Election | ಏನಾಗ್ತಿದೆ ಮಹಾಘಟಬಂಧನ್​​ದಲ್ಲಿ..?; ಆರ್​ಜೆಡಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ, ಕಾರಣವೇನು.?

Untitled design (16)
Published on

Patna: ಬಿಹಾರ ಚುನಾವಣೆ (Bihar Election) ದಿನಗಣನೆ ಶುರುವಾಗಿದ್ದು, ವಿಪಕ್ಷ ಮಹಾಘಟಬಂಧನ್ (INDI ಮೈತ್ರಿಕೂಟ) ಗೆ ಮತ್ತೊಂದು ಹಿನ್ನಡೆ ಉಂಟಾಗಿದ್ದು, ಮೊಹಾನಿಯಾ ವಿಧಾನಸಭಾ ಕ್ಷೇತ್ರದ ಆರ್‌ಜೆಡಿ ಅಭ್ಯರ್ಥಿ ಶ್ವೇತಾ ಸುಮನ್ ನಾಮಪತ್ರ ತಿರಸ್ಕೃತಗೊಂಡಿದೆ.

ಶ್ವೇತಾ ಉತ್ತರ ಪ್ರದೇಶ ಮೂಲದವರು ಎಂದು ಕಂಡುಬಂದ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಅವರ ನಾಮಪತ್ರವನ್ನು ತಿರಸ್ಕರಿಸಿದೆ. ಪೂರ್ವ ಚಂಪಾರಣ್‌ನಲ್ಲಿ ಪ್ರದೇಶದಲ್ಲಿ ವಿರೋಧ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿರುವ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಮೂಲಕ ಮಹಾಘಟಬಂಧನ್​ದಿಂದ ಇಬ್ಬರು ಪ್ರಮುಖ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾದಂತಾಗಿದೆ.

ಸುಗೌಲಿಯ ಹಾಲಿ ಆರ್‌ಜೆಡಿ ಶಾಸಕ ಶಶಿಭೂಷಣ್ ಸಿಂಗ್, ಪ್ರಸ್ತುತ ನಡೆತಯುತ್ತಿರುವ ಚುನಾವಣೆಯಲ್ಲಿ ಇಂಡಿಯಾ ಕೂಟದ ಮಿತ್ರಪಕ್ಷವಾದ ವಿಕಾಸಶೀಲ ಇನ್ಸಾನ್ ಪಕ್ಷದ (ವಿಐಪಿ) ಅಭ್ಯರ್ಥಿಯಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದರು. ಆದರೆ, ಇದರಲ್ಲಿ ತಾಂತ್ರಿಕ ಲೋಪದೋಷಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಸಿಂಗ್​ ನಾಮಪತ್ರ ತಿರಸ್ಕೃತವಾಗಿದೆ. ನಿಯಮಗಳ ಪ್ರಕಾರ ನೋಂದಾಯಿತವಲ್ಲದ ಪಕ್ಷಗಳು ನಾಮಪತ್ರ ಸಲ್ಲಿಸುವಾಗ ತಮ್ಮೊಂದಿಗೆ 10 ಪ್ರಸ್ತಾಪಕರೊಂದಿಗೆ ಸಲ್ಲಿಸಬೇಕಾಗಿತ್ತು, ಆದರೆ ಅವರು ಈ ಹಿಂದಿನ ಆರ್‌ಜೆಡಿಯ ಮಾನದಂಡಗಳನ್ನು ಅನುಸರಿಸಿ ಕೇವಲ ಒಬ್ಬರೊಂದಿಗೆ ಸೇರಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಪರಿಶೀಲನೆಯ ಸಂದರ್ಭದಲ್ಲಿ ನಾಮಪತ್ರದಲ್ಲಿ ದೋಷಗಳಿವೆ ಎಂದು ಅಭಿಪ್ರಾಯಪಟ್ಟು ಚುನಾವಣಾ ಆಯೋಗ ಅದನ್ನು ತಿರಸ್ಕರಿಸಿದೆ.

ಮಹಾಘಟಬಂಧನ್‌ನ ಸಂಕಷ್ಟಕ್ಕೆ ಮತ್ತೊಂದು ಕಾರಣವೂ ಇದ್ದು, ಆರ್‌ಜೆಡಿ ಟಿಕೆಟ್​ ಸಿಗದ ಹಿನ್ನಲೆಯಲ್ಲಿ ಬಂಡಾಯವೆದ್ದು ಪಕ್ಷೇತರವಾಗಿ ಉಮೇದುವಾರಿಕೆ ಸಲ್ಲಿಸಿದ್ದ ಓಂ ಪ್ರಕಾಶ್ ಚೌಧರಿ ನಾಮಪತ್ರವೂ ಕೂಡ ರದ್ದಾಗಿದೆ. ಚೌಧರಿ ಸಲ್ಲಿಸಿರುವ ನಾಮಪತ್ರದಲ್ಲಿ ಹಲವಾರು ಪುಟಗಳು ಖಾಲಿಯಾಗಿದ್ದವು ಆದ್ದರಿಂದ ಅವರು ಚುನಾವಣಾ ಕಣದಿಂದ ಹಿಂದೆ ಸರಿಯಬೇಕಾಗಿದೆ ಎಂದು ವರದಿಯಾಗಿದೆ. ಮೊದಲ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಕೆ ಅಕ್ಟೋಬರ್ 17 ರಂದು ಕೊನೆಗೊಂಡಿದ್ದರೆ, ಎರಡನೇ ಹಂತದ ಮತದಾನದ ಕೊನೆಯ ದಿನಾಂಕ ಸೋಮವಾರ ಕೊನೆಗೊಂಡಿತು. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net