ಯೆಮೆನ್‌ನ ಹೌತಿಗಳ ಮೇಲೆ ಅಮೆರಿಕ ದಾಳಿ: 31 ಮಂದಿ ಸಾವು, ನಿಮ್ಮ ಟೈಂ ಮುಗಿದಿದೆ ಎಂದು ಟ್ರಂಪ್ ಎಚ್ಚರಿಕೆ! Houthis

Houthis
Published on

Houthis : ಯೆಮೆನ್‌ನಲ್ಲಿ ಹೌತಿಗಳ ಮೇಲೆ ಅಮೆರಿಕ ಸೇನೆ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಇಲ್ಲಿಯವರೆಗೆ, ಹೌತಿಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ 31 ಜನರು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ಹೌತಿಗಳ ಕಾಲ ಮುಗಿದಿದೆ. ನಿಮ್ಮ ದಾಳಿಗಳನ್ನು ನೀವು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಟ್ರಂಪ್​ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಯೆಮೆನ್ ರಾಜಧಾನಿ ಸನಾ ಮೇಲೆ ಅಮೆರಿಕದ ಪಡೆಗಳು ದಾಳಿಯನ್ನು ಮುಂದುವರಿಸಿವೆ. ಅಂದಹಾಗೆ ಸನಾ, ಹೌತಿಗಳ ನೆಲೆಯಾಗಿದೆ. ಇದೀಗ ಅಮೆರಿಕದ ಬಾಂಬ್ ದಾಳಿಯಿಂದ ಸನಾ ಸುತ್ತಮುತ್ತಲಿನ ಪ್ರದೇಶ ನಡುಗಿದ್ದು, ಬೃಹತ್ ಬಾಂಬ್ ದಾಳಿಯಲ್ಲಿ 31 ಜನರು ಮೃತಪಟ್ಟಿದ್ದಾರೆ. ಅವರಲ್ಲಿ ನಾಲ್ವರು ಮಕ್ಕಳು ಮತ್ತು ಓರ್ವ ಮಹಿಳೆಯು ಸಹ ಸೇರಿದ್ದಾರೆ.

ಈ ದಾಳಿಗಳ ಬಗ್ಗೆ ಟ್ರಂಪ್ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ಎಲ್ಲ ಹೌತಿ ಭಯೋತ್ಪಾದಕರಿಗೆ ನನ್ನೊದೊಂದು ಎಚ್ಚರಿಕೆ. ನಿಮ್ಮ ಸಮಯ ಮುಗಿದಿದೆ. ಇಂದಿನಿಂದ ನೀವು ನಿಮ್ಮ ದಾಳಿಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ನೀವು ಹಿಂದೆಂದೂ ನೋಡಿರದ ನರಕವನ್ನು ನೋಡುತ್ತೀರಿ ಎಂದು ಟ್ರಂಪ್​ ಎಚ್ಚರಿಸಿದ್ದಾರೆ. ಅಲ್ಲದೆ, ಇರಾನ್‌ಗೂ ವಾರ್ನಿಂಗ್​ ಕೊಟ್ಟಿದ್ದಾರೆ. ಹೌತಿಗಳಿಗೆ ಬೆಂಬಲ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಹೌತಿಯ ರಾಜಕೀಯ ಬ್ಯೂರೋ ಅಮೆರಿಕದ ದಾಳಿಗಳನ್ನು ತೀವ್ರವಾಗಿ ಖಂಡಿಸಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಯುದ್ಧ ಅಪರಾಧಗಳನ್ನು ಮಾಡಿದ್ದಾರೆ ಎಂದು ಅದು ಆರೋಪಿಸಿದೆ. ಈ ದಾಳಿಗಳಿಗೆ ಪ್ರತಿಕ್ರಿಯಿಸಲು ಯೆಮೆನ್ ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಎಂದು ಎಚ್ಚರಿಸಿದೆ.

2023ರ ಅಕ್ಟೋಬರ್​ನಲ್ಲಿ ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದ ನಂತರ, ಹೌತಿಗಳು ಅದರ ಕರಾವಳಿಯಲ್ಲಿ ಹಡಗುಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ಇದು ಜಾಗತಿಕ ವ್ಯಾಪಾರಕ್ಕೆ ಅಡ್ಡಿಯಾಗಿದೆ. 2023 ರಿಂದ, ಹೌತಿಗಳು ಯುಎಸ್ ಯುದ್ಧನೌಕೆಗಳ ಮೇಲೆ 174 ಬಾರಿ ಮತ್ತು ವಾಣಿಜ್ಯ ಹಡಗುಗಳ ಮೇಲೆ 145 ಬಾರಿ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net