ಪ್ರಧಾನಿಯಾಗುವಷ್ಟು ಬುದ್ಧಿವಂತಿಕೆ ರಾಹುಲ್​ ಗಾಂಧಿಗೆ ಇಲ್ಲ: ಅಮೆರಿಕ ಗಾಯಕಿ ಮಿಲ್ಬೇನ್​ ವ್ಯಂಗ್ಯ! Rahul Gandhi

Rahul Gandhi
Published on

ನವದೆಹಲಿ​ : ಅಮೆರಿಕದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್ ಅವರು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ( Rahul Gandhi ) ಅವರನ್ನು ಟೀಕಿಸಿದ್ದು, ನಿಮ್ಮ ಹೇಟ್​ ಇಂಡಿಯಾ ಟೂರ್​ (ನಾನು ಭಾರತವನ್ನು ದ್ವೇಷಿಸುತ್ತೇನೆ) ಅನ್ನು ಮತ್ತೆ ಶುರು ಮಾಡಿ ಎನ್ನುವ ಮೂಲಕ ವ್ಯಂಗ್ಯವಾಡಿದ್ದಾರೆ.

ಈ ಹಿಂದೆ ಹಲವು ಬಾರಿ ಪ್ರಧಾನಿ ಮೋದಿ ಅವರನ್ನು ಹೊಗಳಿರುವ ಮಿಲ್ಬೆನ್, ಪ್ರಧಾನಿಯಾಗಲು ರಾಹುಲ್ ಗಾಂಧಿಗೆ ಬುದ್ಧಿವಂತಿಕೆ ಇಲ್ಲ ಎಂದು ಅಣಕಿಸಿದ್ದಾರೆ. 'ನರೇಂದ್ರ ಮೋದಿ ಡೊನಾಲ್ಡ್​ ಟ್ರಂಪ್‌ಗೆ ಹೆದರುತ್ತಾರೆ' ಎಂದು ಈ ಹಿಂದೆ ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗಾಯಕಿ ಮಿಲ್ಬೇನ್ ಅವರು​ ರಾಹುಲ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತ, ರಷ್ಯಾದಿಂದ ತೈಲವನ್ನು ಖರೀದಿಸುವುದಿಲ್ಲ ಎಂದು ಟ್ರಂಪ್ ಘೋಷಣೆ ಮಾಡಲು ನರೇಂದ್ರ ಮೋದಿ ಅವರೇ ಅವಕಾಶ ನೀಡುತ್ತಿದ್ದಾರೆ. ಅಲ್ಲದೆ, ಟ್ರಂಪ್​ ಪದೇಪದೆ ನಿರ್ಲಕ್ಷಿಸಿದರು ಮೋದಿಯವರೇ ಅಭಿನಂದನಾ ಸಂದೇಶಗಳನ್ನು ಕಳುಹಿಸುವುದನ್ನು ಮುಂದುವರೆಸಿದ್ದಾರೆ ಮತ್ತು ಆಪರೇಷನ್ ಸಿಂಧೂರ ಕುರಿತು ಟ್ರಂಪ್ ಅವರ ವಾದಗಳನ್ನು ಮೋದಿ ವಿರೋಧಿಸುತ್ತಿಲ್ಲ ಎಂಬ ಗಂಭೀರ ಆರೋಪಗಳನ್ನು ರಾಹುಲ್ ಗಾಂಧಿ ಮಾಡಿದ್ದರು. ಈ ಎಲ್ಲ ಆರೋಪಗಳನ್ನು ಟೀಕಿಸಿರುವ ಮಿಲ್ಬೆನ್, ಅದೆಲ್ಲ ಸುಳ್ಳು ಎಂದಿದ್ದಾರೆ.

ಪ್ರಧಾನಿ ಮೋದಿ ಅವರು ಟ್ರಂಪ್‌ಗೆ ಹೆದರುವುದಿಲ್ಲ. ಅಮೆರಿಕದೊಂದಿಗಿನ ಪ್ರಧಾನಿಯ ಸಂಬಂಧವು ರಾಜತಾಂತ್ರಿಕವಾಗಿದೆ. ಟ್ರಂಪ್ ಅಮೆರಿಕದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವಂತೆಯೇ, ನರೇಂದ್ರ ಮೋದಿ ಭಾರತಕ್ಕೆ ಉತ್ತಮವಾದದ್ದನ್ನು ಮಾಡುತ್ತಿದ್ದಾರೆ. ನಾನದನ್ನು ಪ್ರಶಂಸಿಸುತ್ತೇನೆ. ಇಬ್ಬರೂ ನಾಯಕರು ತಮ್ಮ ದೇಶಗಳಿಗೆ ಉತ್ತಮವಾದದ್ದನ್ನು ಮಾಡುತ್ತಾರೆ. ರಾಹುಲ್ ಗಾಂಧಿ ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬುದನ್ನು ನಾನು ನಿರೀಕ್ಷೆ ಮಾಡುವುದಿಲ್ಲ ಏಕೆಂದರೆ, ಅಂತಹ ನಾಯಕತ್ವವನ್ನು ಅರ್ಥಮಾಡಿಕೊಳ್ಳಲು ಮತ್ತು ಭಾರತದ ಪ್ರಧಾನಿಯಾಗಲು ಅವರಿಗೆ ಬುದ್ಧಿವಂತಿಕೆಯ ಕೊರತೆಯಿದೆ ಎಂದು ಮಿಲ್ಬೆನ್ ಹೇಳಿದ್ದಾರೆ. ಅಲ್ಲದೆ, ನಿಮ್ಮ ಐ ಹೇಟ್ ಇಂಡಿಯಾ ಪ್ರವಾಸಕ್ಕೆ ಹಿಂತಿರುಗಿ. ನೀವು ಅಲ್ಲಿರುವ ಏಕೈಕ ಪ್ರೇಕ್ಷಕರಾಗಿರುತ್ತೀರಿ ಎಂದು ಮಿಲ್ಬೆನ್ ರಾಹುಲ್​ ಗಾಂಧಿಯವರ ಕಾಲೆಳೆದಿದ್ದಾರೆ.

ಸಾಂಸ್ಕೃತಿಕ ರಾಯಭಾರಿಯಾಗಿರುವ ಮಿಲ್ಬೆನ್, 2023 ರಲ್ಲಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ ಮೊದಲು ಮೋದಿ ಅವರನ್ನು ಭೇಟಿಯಾದರು. ಆ ಸಮಯದಲ್ಲಿ, ಮಿಲ್ಬೆನ್ ಭಾರತೀಯ ರಾಷ್ಟ್ರಗೀತೆಯನ್ನು ಹಾಡಿ ಪ್ರಧಾನ ಮಂತ್ರಿಯವರ ಪಾದಗಳಿಗೆ ಬಿದ್ದು ಆಶೀರ್ವಾದ ಪಡೆದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಕಷ್ಟು ವೈರಲ್​ ಆಗಿದ್ದವು ಮತ್ತು ಸಾಕಷ್ಟು ಜನರ ಗಮನ ಸೆಳೆದಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net