

ವಾಷಿಂಗ್ಟನ್: ಜಾಗತಿಕವಾಗಿ ಕೋವಿಡ್ 19 ವೈರಸ್ ಸೋಂಕು ಹರಡಿದ ವಿಚಾರದಲ್ಲಿ ಚೀನಾವನ್ನೇ ಹೊಣೆಗಾರನನ್ನಾಗಿ ಮಾಡುವುದಕ್ಕೆ ಅಮೆರಿಕ ಪ್ರಯತ್ನಿಸುತ್ತಿದ್ದು, ಅದರ ವಿರುದ್ಧ ಬೇರೆ ಬೇರೆ ರೀತಿಯಲ್ಲಿ ರಣತಂತ್ರವನ್ನು ಹೆಣೆಯುತ್ತಿದೆ. ಅಮೆರಿಕದ ಸೆನೆಟರ್ ಒಬ್ಬರು ಬಹಿರಂಗಪಡಿಸಿರುವ 18 ಅಂಶಗಳ ಯೋಜನೆಯಲ್ಲೂ ಇದು ಅಭಿವ್ಯಕ್ತಿಗೊಂಡಿದೆ. ಚೀನಾವನ್ನು ಜಾಗತಿಕವಾಗಿ ಮೂಲೆಗುಂಪು ಮಾಡುವ ಸಲುವಾಗಿ ಪ್ರಾದೇಶಿಕವಾಗಿ ಭಾರತ, ವಿಯೆಟ್ನಾಂ ತೈವಾನ್ಗಳ ಜತೆಗಿನ ಸಂಬಂಧವನ್ನು, ವ್ಯವಹಾರವನ್ನು ಇನ್ನಷ್ಟು ಬಲಪಡಿಸುವ ವಿಚಾರವೂ ಅದರಲ್ಲಿ ಪ್ರಸ್ತಾಪವಾಗಿದೆ.
ಅಮೆರಿಕದ ಹಿರಿಯ ಸೆನೆಟರ್ ಥಾಮ್ ಟಿಲ್ಲಿಸ್ ಗುರುವಾರ 18 ಅಂಶಗಳ ಯೋಜನೆ ಬಹಿರಂಗಪಡಿಸಿದ್ದಾರೆ. ಇದರಂತೆ, ಚೀನಾ ಸರ್ಕಾರ ಕೋವಿಡ್ 19 ವೈರಸ್ ಸಂಬಂಧ ತೋರಿದ ನಿರ್ಲಕ್ಷ್ಯದ ಪರಿಣಾಮ ಅಮೆರಿಕನ್ನರಿಗೆ ಅತಿ ಹೆಚ್ಚಿನ ನಷ್ಟ ಉಂಟಾಗಿದೆ. ಚೀನಾ ಸರ್ಕಾರ ತನ್ನದೇ ಪ್ರಜೆಗಳನ್ನು ಕಾರ್ಮಿಕ ಶಿಬಿರಗಳಲ್ಲಿ ಬಂಧಿಯಾಗಿಸುತ್ತದೆ. ಅಲ್ಲದೆ, ಅಮೆರಿಕದ ಟೆಕ್ನಾಲಜಿ, ಉದ್ಯೋಗಗಳನ್ನು ಕಳವು ಮಾಡುತ್ತದೆ ಮತ್ತು ನಮ್ಮ ಮಿತ್ರ ರಾಷ್ಟ್ರಗಳ ಸಾರ್ವಭೌಮತೆಗೆ ಧಕ್ಕೆ ಉಂಟುಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ಟೆಲ್ಲಿಸ್ ಆರೋಪಿಸಿದ್ದಾರೆ.
ಅಮೆರಿಕ ಜಾಗೃತಿಯ ಕಹಳೆಯನ್ನು ಮೊಳಗಿಸಬೇಕು . ಆಗ ಉಳಿದ ರಾಷ್ಟ್ರಗಳೂ ಎಚ್ಚೆತ್ತುಕೊಳ್ಳುತ್ತವೆ. ಅಮೆರಿಕದ ಆರ್ಥಿಕತೆ, ಸಾರ್ವಜನಿಕ ಆರೋಗ್ಯ, ರಾಷ್ಟ್ರೀಯ ಸುರಕ್ಷತೆಯನ್ನು ಚೀನಾದಿಂದ ಕಾಪಾಡಿಕೊಳ್ಳುವ ಸಲುವಾಗಿ ಅದರ ಮೇಲೆ ನಿರ್ಬಂಧ ಹೇರಲು ಮತ್ತು ಕೋವಿಡ್ 19ರ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ಅದನ್ನು ಹೊಣೆಗಾರನನ್ನಾಗಿಸಲು ನನ್ನ ಯೋಜನೆ ನೆರವಿಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ, ತೈವಾನ್, ವಿಯೆಟ್ನಾಂಗಳೊಂದಿಗೆ ಸೇನಾ ಬಾಂಧವ್ಯವನ್ನು ಹೆಚ್ಚಿಸಬೇಕು. ಅವುಗಳ ಜತೆಗೆ ಇದಕ್ಕೆ ಸಂಬಂಧಿಸಿದ ಟೆಕ್ನಾಲಜಿ ಮತ್ತು ಉಪಕರಣಗಳ ಮಾರಾಟ ಮುಂತಾದ ವ್ಯವಹಾರಗಳನ್ನೂ ವೃದ್ಧಿಸಬೇಕು. ಇದಕ್ಕಾಗಿ ಅಮೆರಿಕ ಸರ್ಕಾರ ಕೂಡಲೇ 20 ಶತ ಕೋಟಿ ಡಾಲರ್ ಮಿಲಿಟರಿ ನೆರವಿನ ಪ್ರಸ್ತಾವನೆಯನ್ನು ಅಂಗೀಕರಿಸಬೇಕು. ಇದೇ ರೀತಿ, ಜಪಾನ್ ಮತ್ತು ದಕ್ಷಿಣ ಕೊರಿಯಾಗೂ ಅವುಗಳ ಸೇನೆಯನ್ನು ಬಲಪಡಿಸಲು ಉತ್ತೇಜನ ನೀಡಬೇಕು. ಚೀನಾದಲ್ಲಿ ಉತ್ಪಾದನೆಗೆ ನೀಡಿರುವ ಅವಕಾಶವನ್ನೆಲ್ಲ ಮತ್ತೆ ಅಮೆರಿಕಕ್ಕೆ ಕರೆಯಿಸಿಕೊಳ್ಳಬೇಕು. ಈ ರೀತಿಯಾಗಿ ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತ ಬಂದರೆ ಉಳಿದೆಲ್ಲವನ್ನೂ ನಿಯಂತ್ರಿಸಬಹುದು ಎಂದು ಟೆಲ್ಲಿಸ್ ಹೇಳಿಕೊಂಡಿದ್ದಾರೆ.
ಅಮೆರಿಕದಲ್ಲಿ ಸ್ಟಾಪ್ ಚೀನಾ ಅಭಿಯಾನಕ್ಕೆ ಚಾಲನೆ ನೀಡಬೇಕು. ಚೀನಾದ ಸರ್ಕಾರಿ ಪ್ರಾಯೋಜಿತ ಮಾಧ್ಯಮಗಳನ್ನು ಪ್ರಾಕ್ಸಿಗಳೆಂದು ಪರಿಗಣಿಸಬೇಕು. ಡಬ್ಲ್ಯುಎಚ್ಒ ಸ್ವತಂತ್ರವಾಗಿದೆ ಎಂಬುದನ್ನು ಖಾತ್ರಿಪಡಿಸಬೇಕು. ಈ ಬಗ್ಗೆ ತನಿಖೆ ನಡೆಸಿ ಅದರ ಸಂಪೂರ್ಣ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)