

ನವದೆಹಲಿ: ಸದ್ಯ ಕರೊನಾ ಚಿಕಿತ್ಸೆಗಾಗಿ ಬಳಸಲಾಗುವ ಔಷಧಗಳಲ್ಲಿ ಮಲೇರಿಯಾ ನಿವಾರಕ ಮಾತ್ರೆ ಹೈಡ್ರೊಕ್ಸಿಕ್ಲೋರೋಕ್ಸಿನ್ ಹಾಗೂ ಕ್ಲೋರೋಕ್ವಿನ್ ಕೂಡ ಪ್ರಮುಖವಾಗಿದೆ. ಭಾರತದ ಈ ಮಾತ್ರೆಗಳನ್ನು ವಿಶ್ವದ 120ಕ್ಕೂ ಅಧಿಕ ರಾಷ್ಟ್ರಗಳಿಗೆ ಪೂರೈಕೆ ಮಾಡಲಾಗುತ್ತಿದೆ.
ಭಾರತದಲ್ಲಿ ಕರೊನಾದ ಆರಂಭಿಕ ಹಂತದ ಹಾಗೂ ತೀವ್ರ ಸ್ವರೂಪದ ಅನಾರೋಗ್ಯಕ್ಕೆ ಒಳಗಾದವರಿಗೆ ಇದನ್ನು ನೀಡಲಾಗುತ್ತಿದೆ. ಜತೆಗೆ ಇದು ಅತ್ಯಂತ ಕಡಿಮೆ ಬೆಲೆಯ ಮಾತ್ರೆಯಾಗಿದೆ.
ಈ ಮಾತ್ರೆ ಬಳಕೆಯಿಂದ ಅಡ್ಡಪರಿಣಾಮಗಳಾಗುತ್ತವೆ ಎಂದು ವರದಿಯಾದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನು ಶಿಫಾರಸು ಮಾಡುವುದರಿಂದ ಹಿಂದೆ ಸರಿದಿತ್ತು. ಆದರೆ, ರೋಗಿಗೆ ಮಾರಕವಾಗಿ ಪರಿಣಮಿಸಬಲ್ಲುದು ಎಂದು ಉಲ್ಲೇಖಿಸಿದ ವರದಿಯೇ ವಿಶ್ವಾಸಾರ್ಹವಾಗಿಲ್ಲ ಎಂದು ಅಭಿಪ್ರಾಯ ಪಟ್ಟ ವಿಶ್ವ ಆರೋಗ್ಯ ಸಂಸ್ಥೆ ಮತ್ತೆ ಈ ಮಾತ್ರೆ ಬಗ್ಗೆ ಸಾಲಿಡಾರಿಟಿ ಟ್ರಯಲ್ ಆರಂಭಿಸಿದೆ.
ಈ ನಡುವೆ, ಕರೊನಾ ರೋಗಿಗಗಳಿಗೆ ಈ ಮಾತ್ರೆಯನ್ನು ತುರ್ತು ಸಂದರ್ಭದಲ್ಲಿ ನೀಡುವುದನ್ನು ಅಮೆರಿಕ ಆಹಾರ ಮತ್ತು ಔಷಧ ಇಲಾಖೆ ರದ್ದು ಪಡಿಸಿದೆ. ಹೈಡ್ರೊಕ್ಸಿಕ್ಲೋರೋಕ್ಸಿನ್ ಹಾಗೂ ಕ್ಲೋರೋಕ್ವಿನ್ ಕರೊನಾಗೆ ಮದ್ದಲ್ಲ, ಜತೆಗೆ ಇದರಿಂದ ಅಡ್ಡಪರಿಣಾಮಗಳು ಉಂಟಾಗುತ್ತಿವೆ ಎಂದು ಹೇಳಿದೆ. ಆದರೆ ಅಮೆರಿಕದ ಸಂಸ್ಥೆಗಳೇ ಇವೆರಡು ಮಾತ್ರೆಗಳ ಉಪಯೋಗವನ್ನು ಅರಿಯುವಲ್ಲಿ ಸಫಲವಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಹೇಳಿದ್ದರು.
ಅಮೆರಿಕದ ಈ ಕ್ರಮದ ಹಿಂದೆ ಹುನ್ನಾರವಿದೆ ಎಂದೇ ವಿಶ್ಲೇಷಿಸಲಾಗಿದೆ. ಸದ್ಯ ಕರೊನಾಗೆ ಭಾರಿ ಪ್ರಯೋಜನಕಾರಿ ಎಂದು ಬಿಂಬಿಸಲಾಗಿರುವ ರೆಮ್ಡೆಸಿವಿರ್ ಎಂಬ ಲಸಿಕೆ ಅಮೆರಿಕ ಮೂಲದ ಗಿಲಿಯಾಡ್ ಸಂಸ್ಥೆಯ ಉತ್ಪನ್ನ. ಇದಲ್ಲದೇ, ಈಗ ಪರ್ಯಾಯವಾಗಿ ಬಳಕೆಯಲ್ಲಿರುವ ಕೆಲ ಔಷಧಗಳು ಕೂಡ ಅಮೆರಿಕಕ್ಕೆ ಸೇರಿದವು. ಹೀಗಾಗಿ ಅತಿ ಕಡಿಮೆ ಬೆಲೆಯ ಈ ಮಾತ್ರೆಗಳ ಬಳಕೆ ವ್ಯಾಪಕವಾದರೆ, ಅವುಗಳಿಗೆ ಬೇಡಿಕೆ ಕುಸಿಯುತ್ತದೆ ಎಂದೇ ಹೇಳಲಾಗುತ್ತಿದೆ. ತನ್ನ ಕಂಪನಿಗಳ ವಾಣಿಜ್ಯ ಹಿತಾಸಕ್ತಿ ಕಾಪಾಡುವ ಒತ್ತಡವೂ ಅಮೆರಿಕದ ಮೇಲಿದೆ ಎನ್ನಲಾಗಿದೆ.