

ನ್ಯೂಯಾರ್ಕ್: ಕರೊನಾ ಸೋಂಕಿನಿಂದ ಅಕ್ಷರಶಃ ತತ್ತರಿಸಿ ಹೋಗಿರುವ ಅಮೆರಿಕದಲ್ಲೀಗ ಸಾವಿನ ಮೆರವಣಿಗೆಯೇ ನಡೆಯುತ್ತಿದೆ. ನಿನ್ನೆಯಿಂದ ಇಲ್ಲಿಯವರೆಗೆ ಒಂದೇ ದಿನದಲ್ಲಿ 2,129 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಒಂದೇ ದಿನದಲ್ಲಿ ಮೃತಪಟ್ಟವರಲ್ಲಿ ಇದು ಅತ್ಯಧಿಕ ಸಂಖ್ಯೆಯಾಗಿದೆ. ಈ ಮೂಲಕ ಅಮೆರಿಕದ ಸಾವಿನ ಸಂಖ್ಯೆ 25 ಸಾವಿರದ ಗಡಿ ದಾಟಿದೆ!
ಅಮೆರಿಕದ ಜನಸಂಖ್ಯೆ ಸುಮಾರು 33 ಕೋಟಿ. ಈ ಪೈಕಿ ಇದುವರೆಗೆ 6.5 ಲಕ್ಷ ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು, ಇಡೀ ದೇಶವೇ ತಲ್ಲಣಗೊಂಡಿದೆ. ಅತ್ಯಧಿಕ ಕರೊನಾ ಸೋಂಕು, ಅತ್ಯಧಿಕ ಸಾವು ಎಲ್ಲದರಲ್ಲಿಯೂ ವಿಶ್ವದ ದೊಡ್ಡಣ್ಣದ್ದು ಈಗ ನಂ.1 ಸ್ಥಾನ!
ಇದೇ 10ರಂದು ಅಮೆರಿಕದಲ್ಲಿ ಒಂದೇ ದಿನಕ್ಕೆ 2,074 ಮಂದಿ ಮೃತಪಟ್ಟಿದ್ದರು. ಇದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಆದರೆ ಇದೀಗ ಈ ದಾಖಲೆಯನ್ನೂ ಅಮೆರಿಕ ಮುರಿದಿದೆ.
ನ್ಯೂಯಾರ್ಕ್‌ನಲ್ಲಿ ಅತ್ಯಧಿಕ ಸಾವು ಸಂಭವಿಸಿದ್ದು, ಅತ್ಯಧಿಕ ಕರೊನಾ ಸೋಂಕು ಪ್ರಕರಣ ಕೂಡ ಇಲ್ಲಿಂದಲೇ ಪತ್ತೆಯಾಗಿದೆ. ನ್ಯೂಯಾರ್ಕ್ ಒಂದರಲ್ಲಿಯೇ ಇದುವರೆಗೆ 2,03,020 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇಲ್ಲಿಯ ಜನಸಂಖ್ಯೆ ಸುಮಾರು 84 ಲಕ್ಷ. ಇದುವರೆಗೆ ಇಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 10,842.
ಈ ವೈರಸ್ ವಿರುದ್ಧ ಹೋರಾಡಲು ನಾವು ಎಲ್ಲ ರೀತಿಯಲ್ಲಿಯೂ ಕ್ರಮ ತೆಗೆದುಕೊಂಡಿದ್ದೇವೆ. ಪ್ರತಿಯೊಬ್ಬರ ಜೀವನವೂ ನಮಗೆ ಮುಖ್ಯ. ಇಂಥ ಕತ್ತಲೆಯಲ್ಲಿಯೂ ಬೆಳಕಿನ ಕಿರಣ ಮೂಡಿ ಬರುವ ಆಶಾಭಾವನೆಯನ್ನು ನಾವು ಹೊಂದಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಈಗ ನಾವು ಕತ್ತಲ ಕೂಪವನ್ನು ನೋಡುತ್ತಿದ್ದೇವೆ. ಆ ಕೂಪದ ಕೊನೆಯಲ್ಲಿ ಬೆಳಕು ಕಾಣಿಸುತ್ತಿದೆ. ಆ ಬೆಳಕಿನತ್ತ ನಾವು ಸಾಗುತ್ತಿದ್ದೇವೆ. ಇಂಥ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸುವ ವಿಶ್ವಾಸ ಇದೆ. ಈ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.
‘ನಮ್ಮಲ್ಲಿ ಇತರ ದೇಶಗಳಿಂದ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳಿವೆ. ಒಂದು ಲಕ್ಷ ಜನರಿಗೆ 34.7 ಐಸಿಯು ಹಾಸಿಗೆಗಳಿವೆ, ಇದು ಇತರ ದೇಶಗಳಿಗೆ ಹೋಲಿಸಿದರೆ ಅತಿ ದೊಡ್ಡ ಸಂಖ್ಯೆ. ಇಟಲಿಯಲ್ಲಿ ಲಕ್ಷ ಜನರಿಗೆ ಇರುವುದು ಕೇವಲ 12.5 ಐಸಿಯು ಹಾಸಿಗೆ, ಫ್ರಾನ್ಸ್‌ನಲ್ಲಿ 11.6, ಸ್ಪೇನ್‌ನಲ್ಲಿ 9.7 ಹಾಸಿಗೆಗಳಿದ್ದು ನಮ್ಮದು ಅತಿ ದೊಡ್ಡ ವೈದ್ಯಕೀಯ ಸೌಲಭ್ಯ ಇರುವ ದೇಶ’ ಎಂದು ಟ್ರಂಪ್ ತಮ್ಮ ದೇಶವನ್ನು ಶ್ಲಾಘಿಸಿದ್ದಾರೆ.
(ಏಜನ್ಸೀಸ್)