ಹೊಸ ಅಧ್ಯಕ್ಷರ ನಿರೀಕ್ಷೆಯಲ್ಲಿ ಅಮೆರಿಕ: ಇಂದು ಅಂತಿಮ ಮತದಾನ

Trump-Joe Biden
Published on

ವಾಷಿಂಗ್ಟನ್: ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಯಲ್ಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಂತಿಮ ಹಂತದ ಮತದಾನ ಇಂದು (ಮಂಗಳವಾರ) ನಡೆಯಲಿದೆ. ಮರುಆಯ್ಕೆ ಬಯಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರ ಭವಿಷ್ಯ ಶೀಘ್ರದಲ್ಲೇ ಹೊರಬೀಳಲಿದೆ. ಈವರೆಗೆ 9.30 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಿದ್ದಾರೆ.

ಪ್ರಚಾರದ ಕೊನೆಯ ದಿನ ಟ್ರಂಪ್ ಉತ್ತರ ಕೆರೊಲಿನಾದಿಂದ ವಿಸ್ಕಾನ್ಸಿನ್ ನಡುವೆ 5 ರ್ಯಾಲಿಗಳನ್ನು ನಡೆಸಿದ್ದಾರೆ. ಮತ್ತೊಂದೆಡೆ ಬಿಡೆನ್ ತಮ್ಮ ಹೆಚ್ಚಿನ ಸಮಯವನ್ನು ಪೆನ್ಸಿಲ್ವೇನಿಯಾದ ಮತದಾರರ ಮೇಲೆ ಕೇಂದ್ರೀಕರಿಸಿದ್ದಾರೆ. ಅಲ್ಲಿ ಕಳೆದ ಬಾರಿ ಟ್ರಂಪ್ ಅತ್ಯಲ್ಪ ಅಂತರದಿಂದ ಜಯಗಳಿಸಿದ್ದರು. ಹೀಗಾಗಿ ಅಲ್ಲಿ ಜಯ ಸಾಧಿಸಿದರೆ ಟ್ರಂಪ್ ಹಾದಿ ಮತ್ತಷ್ಟು ಕಠಿಣವಾಗಲಿದೆ ಎಂಬುದು ಬಿಡೆನ್ ಲೆಕ್ಕಾಚಾರ. ಜತೆಗೆ ಟ್ರಂಪ್ ಗೆಲುವಿಗೆ ನಿರ್ಣಾಯಕ ರಾಜ್ಯಗಳಾದ ಓಹಿಯೊ, ಅಯೋವಾ, ಟೆಕ್ಸಾಸ್ ಮತ್ತು ಜಾರ್ಜಿಯಾದಲ್ಲಿ ಇತ್ತೀಚೆಗೆ ಡೆಮಾಕ್ರಟಿಕ್ ಹೆಚ್ಚು ಜನಪ್ರಿಯತೆ ಪಡೆದಿದ್ದು, ಅಲ್ಲಿ ಬಿಡೆನ್ ಪರವಾಗಿ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪ್ರಚಾರ ನಡೆಸಿದ್ದಾರೆ.

ಕಾಂಗ್ರೆಸ್​ಗೂ ಮಧ್ಯಂತರ ಚುನಾವಣೆ: ಅಧ್ಯಕ್ಷೀಯ ಚುನಾವಣೆಯ ಜತೆಗೆ ಸೆನೆಟ್​ನ 100 ಸ್ಥಾನಗಳ ಪೈಕಿ 35ಕ್ಕೆ ಹಾಗೂ 435 ಬಲದ ಜನಪ್ರತಿನಿಧಿ ಸಭೆಗೆ (ಹೌಸ್ ಆಫ್ ರೆಪ್ರಸೆಂಟಟೀವ್ಸ್) ಮತದಾನ ನಡೆಯುತ್ತಿದೆ. ಇದರೊಟ್ಟಿಗೆ 11 ರಾಜ್ಯಗಳ ಗವರ್ನರ್ ಹುದ್ದೆಗೂ ಚುನಾವಣೆ ನಡೆಯುತ್ತಿದೆ. ‘ಎರಡೂ ಪಕ್ಷಗಳ ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷೀಯ ಅಭ್ಯರ್ಥಿಗಳ ಮಧ್ಯೆ 3 ಸುತ್ತಿನ ಡಿಬೇಟ್ ನಡೆದು ದೇಶದ ಭವಿಷ್ಯ ಕುರಿತು ಒಲವು-ನಿಲುವು ವ್ಯಕ್ತವಾಗುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net