

ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಇಂದು ನಡೆಯುತ್ತಿದ್ದು, ಬೆಳಗ್ಗೆ ಏಳು ಗಂಟೆಗೆ ಮಂದಗತಿಯಲ್ಲಿ ಮತದಾನ ಶುರುವಾಗಿದೆ. ಸಂಜೆ 6 ಗಂಟೆ ತನಕ ಮತದಾನ ಮಾಡುವುದಕ್ಕೆ ಅವಕಾಶವಿದ್ದು, ಸಂಜೆ ವೇಳೆಗೆ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯೊಳಗೆ ಸೇರಲಿದೆ.
ಕರೊನಾ ಸೋಂಕು ಕಾಣಿಸಿದ ಬಳಿಕ ರಾಜ್ಯದಲ್ಲಿ ನಡೆಯತ್ತಿರುವ ಮೊದಲ ಚುನಾವಣಾ ಪ್ರಕ್ರಿಯೆ ಇದಾಗಿದೆ. ಕರೊನಾ ಪಾಸಿಟಿವ್ ಇರುವವರಿಗೂ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಅಕಸ್ಮಾತ್ ಮತಗಟ್ಟೆ ಬರುವುದಕ್ಕೆ ಇಷ್ಟಪಡದ ಕರೋನ ಪಾಸಿಟಿವ್ ಇರುವವರು ಅಂಚೆ ಮೂಲಕವೂ ಮತ ಚಲಾಯಿಸಬಹುದು ಎಂದು ಆಯೋಗ ತಿಳಿಸಿದೆ.
ಮತದಾನಕ್ಕೂ ಮೊದಲು ಮತಯಂತ್ರಗಳ ಪರಿಶೀಲನೆ ಹಿನ್ನೆಲೆ ಅಣಕು ಮತದಾನ ನಡೆಸಿ ಪರಿಶೀಲಿಸಲಾಗಿದ್ದು, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಶಿರಾದಲ್ಲಿ ಕರೋನ ಪಾಸಿಟಿವ್ ಇರುವವರಿಗೆ ಸಂಜೆ 5 ರಿಂದ 6 ಗಂಟೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಆರ್ ಆರ್ ನಗರ ಕ್ಷೇತ್ರದಲ್ಲೂ ಮತದಾನ ಶುರುವಾಗಿದ್ದು, ಲಗ್ಗೆರೆ ಮತಗಟ್ಟೆಯಲ್ಲಿ ಮತದಾರರ ಹೆಸರು ಡಿಲೀಟ್ ಆದ ಪ್ರಕರಣವೂ ವರದಿಯಾಗಿದೆ. (ದಿಗ್ವಿಜಯ ನ್ಯೂಸ್)