PHOTO| ತಾಜ್​ ಮಹಲ್​ ಸಂದರ್ಶಕರ ಪುಸ್ತಕದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್​ ಬರೆದಿದ್ದು ಹೀಗೆ...

Trump Visitor Book
Published on

ಆಗ್ರಾ: ಅಹಮದಾಬಾದ್​ನಲ್ಲಿ ನಡೆದ ನಮಸ್ತೆ ಟ್ರಂಪ್​ ಕಾರ್ಯಕ್ರಮದ ಬಳಿಕ ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲ್​ಗೆ ಭೇಟಿ ನೀಡಿ ಅಲ್ಲಿನ ವಾಸ್ತುಶಿಲ್ಪವನ್ನು ಟ್ರಂಪ್​ ದಂಪತಿ ಕಣ್ತುಂಬಿಕೊಂಡರು.

ತಾಜ್​ ಮಹಲ್​ ಪ್ರವೇಶಿಸುತ್ತಲೇ ಮೊದಲಿಗೆ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್​ ತಮ್ಮ ಸಂದೇಶವನ್ನು ಹಂಚಿಕೊಂಡರು. ತಾಜ್​ ಮಹಲ್ ಒಂದು​ ವಿಸ್ಮಯವಾಗಿದೆ. ಭಾರತ ಸಂಸ್ಕೃತಿಯಲ್ಲಿನ ವಿವಿಧೆತೆಯ ಸೌಂದರ್ಯ ಮತ್ತು ಶ್ರೀಮಂತಿಕೆಯ ಸಮಯರಹಿತ ಒಡಂಬಡಿಕೆಯಾಗಿದೆ. ಧನ್ಯವಾದ ಭಾರತ ಎಂದು ಟ್ರಂಪ್​ ಬರೆದಿದ್ದಾರೆ.

ಅಹಮದಾಬಾದ್​ನಿಂದ ಕುಟುಂಬ ಸಮೇತ ತೆರಳಿದ ಟ್ರಂಪ್​ ಸಂಜೆ 4.20ರ ಹೊತ್ತಿಗೆ ಆಗ್ರಾಗೆ ಬಂದಿಳಿದರು. ಈ ವೇಳೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್​ ಮತ್ತು ಮುಖ್ಯಮಂತ್ತಿ ಯೋಗಿ ಆದಿತ್ಯಾ ನಾಥ್​ ಟ್ರಂಪ್​ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಸಾಂಪ್ರದಾಯಿಕ ಕಲೆಗಳ ಮೂಲಕ ಟ್ರಂಪ್​ ದಂಪತಿಗೆ ಗೌರವ ಸಲ್ಲಿಸಿದರು. ಬಳಿಕ ಕಾರು ಹತ್ತಿ ಟ್ರಂಪ್​ ದಂಪತಿ ತಾಜ್​ ಮಹಲ್​ ಕಡೆ ಹೊರಟರು.

ತಾಜ್​ ಮಹಲ್​ಗೆ ಆಗಮಿಸಿದ ಟ್ರಂಪ್​ ದಂಪತಿಗೆ ಅಚ್ಚರಿಯು ಕಾದಿತ್ತು. ವಿವಿಧ ಕಲಾ ತಂಡಗಳು ಟ್ರಂಪ್​ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅಮೆರಿಕ ಮತ್ತು ಭಾರತ ಬಾವುಟ ಹಿಡಿದು ವಿದ್ಯಾರ್ಥಿಗಳು ಟ್ರಂಪ್​ ದಂಪತಿಯನ್ನು ಖಷಿಯಿಂದಲೇ ಸ್ವಾಗತಿಸಿದರು. ರಸ್ತಯುದ್ದಕ್ಕೂ ಜನ ವಿಶ್ವದ ದೊಡ್ಡಣ್ಣನನ್ನು ಕಣ್ತುಂಬಿಕೊಳ್ಳಲು ಸಾಲುಗಟ್ಟಿ ನಿಂತಿದ್ದರು. ಅಲ್ಲದೆ, ಟ್ರಂಪ್​ ದಂಪತಿ ಸ್ವಾಗತ ಕೋರುವ ಪೋಸ್ಟರ್​ಗಳು ರಸ್ತೆಯುದ್ದಕ್ಕೂ ರಾರಾಜಿಸುತ್ತಿದ್ದವು.

ಮುಮ್ತಾಜ್​ ಪ್ರೀತಿಯ ನೆನಪಿಗಾಗಿ ಶಹಜಹಾನ್​ ಕಟ್ಟಿಸಿದ ತಾಜ್​ ಮಹಲ್​ ಇತಿಹಾಸವನ್ನು ಹಾಗೂ ಅದರ ವಾಸ್ತು ಶಿಲ್ಪವನ್ನು ಗೈಡ್​ ಮೂಲಕ ಟ್ರಂಪ್​ ದಂಪತಿ ಪರಿಚಯಿಸಿಕೊಂಡರು. ವಿಶೇಷವೆಂದರೆ ಪ್ರತಿಯೊಂದು ಕ್ಷಣವನ್ನು ಟ್ರಂಪ್​ ದಂಪತಿ ಅನುಭವಿಸಿದರು. ಪ್ರೇಮ ಸೌಧದ ಮುಂದೆ ನಿಂತು ಕ್ಯಾಮರಾಗೆ ಪೋಸ್​ ನೀಡಿ ತಮ್ಮ ಭೇಟಿಯನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಂಡರು.

ಇಷ್ಟೇ ಅಲ್ಲದೆ, ಟ್ರಂಪ್​ ದಂಪತಿ ಪುತ್ರಿ ಇವಾಂಕ ಮತ್ತು ಅಳಿಯ ಜರೇದ್​ ಕುಶ್ನರ್​ ಕೂಡ ತಾಜ್​ ಮಹಲಿನ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಇದರ ಜತೆಯಲ್ಲೇ ಆಗಮಿಸಿದ್ದ ಅಮೆರಿಕ ನಿಯೋಗವು ಕೂಡ ಪ್ರೇಮಸೌಧದ ಸೌಂದರ್ಯವನ್ನು ಸವಿಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net