

ವಾಷಿಂಗ್ಟನ್: ಕರೊನಾದಿಂದಾಗಿ ಆಸ್ಪತ್ರೆ ಸೇರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬೆಳಗ್ಗೆ (ಭಾರತೀಯ ಕಾಲಮಾನ) ಆಸ್ಪತ್ರೆಯಿಂದ ಹೊರಬಂದು ತಮ್ಮ ಬೆಂಬಲಿಗರತ್ತ ಕೈಬೀಸಿದರು.
ವಾಲ್ಟರ್ ರೀಡ್ ಆರ್ಮಿ ಆಸ್ಪತ್ರೆಯಿಂದ ಹೊರಬಂದ ಟ್ರಂಪ್ ಕಪ್ಪು ಬಣ್ಣದ ಎಸ್ಯುವಿ ಕಾರಿನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸಿದರು. ಈ ವೇಳೆ ಬೆಂಬಲಿಗರು ಟ್ರಂಪ್ 2020 ಧ್ವಜ ಹಾರಿಸಿ ಯುಎಸ್ಎ...ಯುಎಸ್ಎ ಎಂದು ಘೋಷಣೆ ಕೂಗಿದರು. ಟ್ರಂಪ್ ಬೆಂಬಲಿಗರತ್ತ ನೋಡಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ತಮ್ಮ ಕೋವಿಡ್ ಅನುಭವದ ಬಗ್ಗೆ ಪ್ರತಿಕ್ರಿಯಿಸಿ, ನಿಜಕ್ಕೂ ಇದೊಂದು ಆಸಕ್ತಿದಾಯಕ ಪ್ರಯಾಣವಾಗಿತ್ತು. ಕೋವಿಡ್ನಿಂದ ನಾನು ಸಾಕಷ್ಟು ಕಲಿತಿದ್ದೇನೆ. ಶಾಲೆಗೆ ಹೋಗಿ ಕಲಿತಂತಾಯಿತು ಎಂದು ಆಸ್ಪತ್ರೆಯ ಕೊಠಡಿಯಲ್ಲಿ ನಿಂತು ಮಾತನಾಡಿರುವ ವಿಡಿಯೋವನ್ನು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಟ್ರಂಪ್ ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟವು ಇತ್ತೀಚಿನ ದಿನಗಳಲ್ಲಿ ಎರಡು ಬಾರಿ ಇದ್ದಕ್ಕಿದ್ದಂತೆ ಕುಸಿಯಿತು. ಆದರೂ ಸೋಮವಾರದಿಂದಲೇ ಅವರನ್ನು ಬಿಡುಗಡೆ ಮಾಡಬಹುದೆಂದು ಇದಕ್ಕೂ ಮುನ್ನ ಟ್ರಂಪ್ ಅವರ ವೈದ್ಯಕೀಯ ತಂಡ ಹೇಳಿತ್ತು. ಇಂದು ಬೆಳಗ್ಗೆ ಟ್ರಂಪ್ ವೈಟ್ ಹೌಸ್ ತಲುಪಲ ಬಹುದು ಮತ್ತು ಅಲ್ಲಿಯೇ ಚಿಕಿತ್ಸೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ಟ್ರಂಪ್ಗೆ ಉಸಿರಾಟ ತೊಂದರೆ, ಜ್ವರ, ಕೆಮ್ಮು ಸೇರಿ ಕೆಲ ರೋಗಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ವಾಷಿಂಗ್ಟನ್ನ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂದಿನ 48 ಗಂಟೆಗಳು ನಿರ್ಣಾಯಕ ಎಂದು ಶನಿವಾರ ರಾತ್ರಿ ವೈದ್ಯರು ಹೇಳಿದ್ದರು. (ಏಜೆನ್ಸೀಸ್)