

ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಬರಮತಿ ಆಶ್ರಮಕ್ಕೆ ಭೇಟಿ ನೀಡುವುದು ಮೊದಲು ಖಚಿತವಾಗಿರಲಿಲ್ಲ. ಈ ಬಗ್ಗೆ ಹಲವರ ಆಕ್ಷೇಪ ವ್ಯಕ್ತವಾಗಿತ್ತು.
ಆದರೆ ಟ್ರಂಪ್ ಮತ್ತು ಅವರ ಪತ್ನಿ ಭಾರತಕ್ಕೆ ಆಗಮಿಸಿ ಮೊದಲು ಭೇಟಿ ನೀಡಿದ್ದೇ ಗಾಂಧೀಜಿಯವರ ತತ್ವ, ಆದರ್ಶಗಳ ಬಿಂಬವಾಗಿರುವ ಸಬರಮತಿ ಆಶ್ರಮಕ್ಕೆ. ಏರ್ಪೋರ್ಟ್ನಿಂದ ನರೇಂದ್ರ ಮೋದಿ ಹಾಗೂ ಟ್ರಂಪ್ ಬೇರೆಬೇರೆ ಕಾರಿನಲ್ಲಿ ಹೊರಟು ಅಹಮದಾಬಾದ್ನ ಸಬರಮತಿ ಆಶ್ರಮವನ್ನು ತಲುಪಿದರು.
ಮೊದಲು ನರೇಂದ್ರ ಮೋದಿಯವರು ಆಶ್ರಮಕ್ಕೆ ತೆರಳಿ, ಮಹಾತ್ಮಾ ಗಾಂಧೀಜಿಯವರಿಗೆ ಗೌರವ ಸಮರ್ಪಿಸಿದರು. ಅದಾದ ಕೆಲವೇ ಕ್ಷಣಗಳಲ್ಲಿ ಆಗಮಿಸಿದ ಟ್ರಂಪ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಬಳಿಕ ಡೊನಾಲ್ಡ್ ಟ್ರಂಪ್, ಮೆಲಾನಿಯಾ ಟ್ರಂಪ್ ಮತ್ತು ನರೇಂದ್ರ ಮೋದಿ ಆಶ್ರಮವನ್ನು ಸುತ್ತಾಡಿದರು. ಟ್ರಂಪ್ ಮತ್ತು ಮೆಲಾನಿಯಾ ಚರಕವನ್ನು ಕುತೂಹಲದಿಂದ ವೀಕ್ಷಿಸಿ ಅದನ್ನು ತಿರುಗಿಸಲೂ ಪ್ರಯತ್ನಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಆಶ್ರಮದ ಹಾಗೂ ಗಾಂಧಿ ತತ್ವಗಳ ಬಗ್ಗೆ ವಿವರಣೆ ನೀಡಿದರು.
ಬಳಿಕ ಮೂವರೂ ಅಲ್ಲಿಯೇ ಇದ್ದ ಕಟ್ಟೆಯ ಮೇಲೆ ಕುಳಿತು ಮಾತುಕತೆ ನಡೆಸಿದರು. ನಂತರ ಟ್ರಂಪ್ ಹಾಗೂ ಮೆಲಾನಿಯಾ ಅವರು ಸಂದರ್ಶಕರ ಪಟ್ಟಿಯಲ್ಲಿ ತಮ್ಮ ಭೇಟಿಯ ಬಗ್ಗೆ ಬರೆದು ಸಹಿ ಮಾಡಿದರು. (ಏಜೆನ್ಸೀಸ್)