ಬೆಂಗಳೂರು ಮೂಲದ ಟೆಕ್ಕಿಗೆ ಅಮೆರಿಕದ ಒ-1 ವೀಸಾ

17-68d2e766d7e6d
Published on

ನವದೆಹಲಿ: ಮೂರು ಬಾರಿ ಎಚ್-1ಬಿ ವೀಸಾ ತಿರಸ್ಕೃತಗೊಂಡಿದ್ದ ಬೆಂಗಳೂರಿನ ಟೆಕ್ಕಿ ತನುಷ್ ಶರಣಾರ್ಥಿಗೆ ಅಮೆರಿಕ ಒ-1 ವೀಸಾ ನೀಡುವ ಮೂಲಕ ಅವರ ಸಾಮರ್ಥ್ಯಕ್ಕೆ ಮಣೆ ಹಾಕಿದೆ. ತನ್ನ ಅಸಾಧಾರಣ ಕೆಲಸ ಮತ್ತು ಕೃತಕ ಬುದ್ಧಿಮತ್ತೆಯಲ್ಲಿನ (ಎಐ) ಸಂಶೋಧನೆಯೇ ಈ ಉನ್ನತ ಸ್ತರದ ವೀಸಾಗೆ ಅನುಮೋದನೆ ಸಿಗಲು ಕಾರಣ ಎಂದು ಈ ಕುರಿತ ಅನುಭವವನ್ನು ಲಿಂಕ್ಡ್ ಇನ್ ಪೋಸ್ಟ್​ನಲ್ಲಿ ಹಂಚಿಕೊಂಡಿರುವ ತನುಷ್ ಹೇಳಿಕೊಂಡಿದ್ದಾರೆ.

ಮೂರು ಬಾರಿ ಎಚ್-1ಬಿ ವೀಸಾ ತಿರಸ್ಕೃತವಾದ ನಂತರ, ಎಐ ಕ್ಷೇತ್ರದಲ್ಲಿನ ತನ್ನ ಅದ್ಭುತ ಸಾಮರ್ಥ್ಯ ಗುರುತಿಸಿ ಅಂತಿಮವಾಗಿ ಒ-1 ವೀಸಾ ಮಂಜೂರು ಮಾಡಲಾಗಿದೆ ಎಂದು ಪ್ರಸ್ತುತ ಕ್ಯಾಲಿಫೋರ್ನಿಯಾದಲ್ಲಿ ಐಬಿಎಂನಲ್ಲಿ ಕೆಲಸ ನಿರ್ವಹಿಸುತ್ತಿರುವ 26 ವರ್ಷದ ತನುಷ್ ವಿವರಿಸಿದ್ದಾರೆ. ಅದೃಷ್ಟವನ್ನು ಅವಲಂಬಿಸುವುದಕ್ಕಿಂತ ಹೆಚ್ಚಾಗಿ ತಾನು ಏನನ್ನು ನಿಯಂತ್ರಿಸಬಹುದು ಎನ್ನುವುದರ ಮೇಲೆ ಗಮನ ಕೇಂದ್ರೀಕರಿಸಿದ್ದಾಗಿ ಹೇಳಿದ್ದಾರೆ. ತಡರಾತ್ರಿ ವರೆಗೆ ಹೆಚ್ಚುವರಿಯಾಗಿ ಪ್ರಯತ್ನಿಸಿ ಉತ್ಪನ್ನಗಳ ತಯಾರಿ, ಸಂಶೋಧನೆಗಳ ಪ್ರಕಟಣೆ ಮಾಡಿ ತನ್ನ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾಗಿ ವಿವರಿಸಿದ್ದಾರೆ. ಕುಟುಂಬ, ಮಾರ್ಗದರ್ಶಕರು, ಸಹೋದ್ಯೋಗಿಗಳು ಮತ್ತು ಗೆಳೆಯರಿಗೆ ಕೃತಜ್ಞತೆ ಅರ್ಪಿಸಿರುವ ತನುಷ್, ತನ್ನ ಪಯಣದುದ್ದಕ್ಕೂ ಬೆನ್ನೆಲುಬಾಗಿ ನಿಂತ ಐಬಿಎಂಗೆ ಧನ್ಯವಾದ ಸಲ್ಲಿಸಿದ್ದಾರೆ.

ಏನಿದು ಒ-1 ವೀಸಾ?: ಒ-1 ವೀಸಾ ಒಂದು ವಲಸೆಯೇತರ ವೀಸಾ ಆಗಿದೆ. ವಿಜ್ಞಾನ, ಕಲೆ, ಶಿಕ್ಷಣ, ವ್ಯವಹಾರ, ಕ್ರೀಡೆಗಳಲ್ಲಿ ಅಸಾಧಾರಣ ಸಾಮರ್ಥ್ಯ ಹೊಂದಿರುವವರು ಅಥವಾ ಸಿನಿಮಾ ಮತ್ತು ಟಿವಿ ಉದ್ಯಮಗಳಲ್ಲಿ ವಿಶೇಷ ಸಾಧನೆ ಮಾಡಿದವರಿಗಾಗಿ ಇದನ್ನು ರೂಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net