

| ಬೆಂಕಿ ಬಸಣ್ಣ ನ್ಯೂಯಾರ್ಕ್
ಅಮೆರಿಕದ ಪೂರ್ವ ಕರಾವಳಿ ವಿಪರೀತ ಚಳಿ, ಚಂಡಮಾರುತ ಮತ್ತು ಹಿಮಪಾತಗಳಿಂದ ತತ್ತರಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿಯೇ ಸಂಭವಿಸಿದ ಅತ್ಯಂತ ಭಯಂಕರ ಹಿಮಮಾರುತ ಇದಾಗಿದೆ. ಈಗಾಗಲೆ, ನ್ಯೂಯಾರ್ಕ್, ನ್ಯೂಜರ್ಸಿ, ವರ್ಜಿನಿಯಾ, ಮೇರಿಲ್ಯಾಂಡ್, ರೋಡ್ ಐಲ್ಯಾಂಡ್ ರಾಜ್ಯಗಳಲ್ಲಿ ತುರ್ತಪರಿಸ್ಥಿತಿ ಘೊಷಿಸಿವೆ. ಇನ್ನೂ ಅನೇಕ ರಾಜ್ಯಗಳು ತುರ್ತಪರಿಸ್ಥಿತಿಯನ್ನು ಘೊಷಿಸುವ ಸ್ಥಿತಿಯಲ್ಲಿವೆ. ಕೆಲವು ಪ್ರದೇಶಗಳಲ್ಲಿ ಎರಡು ಅಡಿಗಳಿಗೂ ಹೆಚ್ಚು ಹಿಮಪಾತವಾಗಿದೆ. ಸುಮಾರು ಮೂರೂವರೆ ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿವೆ. ಸುರಕ್ಷತಾ ದೃಷ್ಟಿಯಿಂದ ಅನೇಕ ಹೆದ್ದಾರಿ, ರಸ್ತೆ, ಸೇತುವೆಗಳನ್ನು ಮುಚ್ಚಲಾಗಿದೆ.
ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೋಸ್ಟನ್ ನಗರದಲ್ಲಿ ಸ್ನೋ-ಎಮರ್ಜೆನ್ಸಿ ಘೊಷಿಸಲಾಗಿದೆ. ಗಂಟೆಗೆ ನೂರಕ್ಕೂ ಹೆಚ್ಚು ಕಿಲೋಮೀಟರ್ ವೇಗದ ಹಿಮ ಚಂಡಮಾರುತ ಬೀಸಿದ್ದು, ಪೂರ್ವ ಕರಾವಳಿಯ ಲಕ್ಷಾಂತರ ಜನರಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಈ ಮೊದಲೇ ಕೊರೊನಾ ಮಹಾಮಾರಿಯಿಂದ ತೀವ್ರ ಕಾರ್ವಿುಕರ ಅಭಾವ ಎದುರಿಸುತ್ತಿದ್ದ ಅಮೆರಿಕದ ಅನೇಕ ಊರುಗಳಲ್ಲಿ ರಸ್ತೆಗಳಲ್ಲಿಯ ಹಿಮವನ್ನು ತೆಗೆಯಲು (snow removal) ಕಾರ್ವಿುಕರು ಸಿಗದೇ ಪರದಾಡುತ್ತಿದ್ದಾರೆ.
ಭಯಾನಕ ಸ್ಥಿತಿ: ಈಗ ದಾಳಿ ಇಟ್ಟಿರುವ Nor'easter (ನಾರ್ ಈಸ್ಟರ್) ಹೆಸರಿನ ಹಿಮಮಾರುತ ಭಾರಿ ಭಯಾನಕವಾಗಿದೆ. ಭೂಮಿಯ (Land) ಮೇಲಿಂದ ಬೀಸುವ ತಣ್ಣನೆಯ ಗಾಳಿಯು, ವಿರುದ್ಧ ದಿಕ್ಕಿನಿಂದ ಸಮುದ್ರದ ಮೇಲಿಂದ ಬೀಸುವ ಬಿಸಿಗಾಳಿಯೊಂದಿಗೆ ಮಿಶ್ರಿತವಾಗಿ, ಇದರಿಂದ ಹವಾಮಾನ ಒತ್ತಡ (air pressure) ಒಮ್ಮೆಲೆ ಕಡಿಮೆಯಾಗಿ, ಕರಾವಳಿಯ ಮೇಲೆ ಬಾಂಬ್ - ಸೈಕ್ಲೋನ್ (ಹಿಮ- ಚಂಡಮಾರುತಗಳು) ಸೃಷ್ಟಿಯಾಗುತ್ತವೆ. ಈ ಪ್ರಕ್ರಿಯೆಗೆ bombogenesis ಎನ್ನುತ್ತಾರೆ. ಈ ಬಾಂಬ್ ಸೈಕ್ಲೋನ್ಗಳು ವಿಪರೀತ ಶೀತವಾಗಿದ್ದು (ಮೈನಸ್ 20 ಡಿಗ್ರಿ) ಗಂಟೆಗೆ ಸುಮಾರು ನೂರಕ್ಕೂ ಹೆಚ್ಚು ಕಿಲೋಮೀಟರ್ ವೇಗದಲ್ಲಿ ಬಿಸಿ ಅಪಾರ ಹಾನಿ ಉಂಟು ಮಾಡುತ್ತವೆ. ಇತ್ತೀಚಿನ ವರದಿಗಳ ಪ್ರಕಾರ ಹಿಮ ಚಂಡಮಾರುತದಿಂದ ಬೋಸ್ಟನ್, ನ್ಯೂಯಾರ್ಕ್, ಲಾಂಗ್ ಐಲ್ಯಾಂಡ್, ಕನೆಕ್ಟಿಕಟ್, ನ್ಯೂ ಇಂಗ್ಲೆಂಡ್, ಮೇನ್, ಪ್ರದೇಶಗಳಲ್ಲಿ ಒಂದು ಅಡಿಯಿಂದ ಮೂರು ಅಡಿಯವರೆಗೆ ಹಿಮಪಾತವಾಗಿದೆ. ಇದು ಇನ್ನೂ ಮುಂದುವರಿಯುವ ಸಾಧ್ಯತೆ ಇದೆ.