

ವಾಷಿಂಗ್ಟನ್: ಜಾಗತಿಕವಾಗಿ ಭಾರೀ ಕುತೂಹಲ ಕೆರಳಿಸಿರುವ ಅಮೆರಿಕ ಚುನಾವಣೆ ಅಂತಿಮ ಹಂತಕ್ಕೆ ಬಂದಿದೆ. ಅಂತಿಮ ಚುನಾವಣಾ ಫಲಿತಾಂಶ ಹೊರಬೀಳದೇ ಇದ್ದರೂ ಸದ್ಯದ ಟ್ರೆಂಡ್ ಪ್ರಕಾರ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಗೆಲುವಿನತ್ತ ಸಾಗಿದ್ದಾರೆ. ಇತ್ತ ಸೋಲಿನ ಸುಳಿವು ಸಿಗುತ್ತಲೇ ಹಾಲಿ ಅಮೆರಿಕ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಸಮಾಧಾನ ಹೊರ ಹಾಕಿದ್ದಾರೆ.
ಕೇವಲ ಒಂದು ಗಂಟೆ ಅವಧಿಯಲ್ಲಿ ಎರಡು ಟ್ವೀಟ್ ಮಾಡಿರುವ ಟ್ರಂಪ್ ಮೊದಲ ಟ್ವೀಟ್ನಲ್ಲಿ "ಮತಎಣಿಕೆ ನಿಲ್ಲಿಸಿ" ಎಂದಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ಚುನಾವಣಾ ದಿನದ ಬಳಿಕ ಬಂದ ಯಾವುದೇ ಮತಗಳನ್ನು ಎಣಿಸಲಾಗುವುದಿಲ್ಲ ಎಂದು ಹೇಳುವ ಮೂಲಕ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆಯೂ ಸಹ ಟ್ರಂಪ್ ಅಸಮಾಧಾನ ಹೊರಹಾಕಿದ್ದರು. ಶ್ವೇತಭವನದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದರು. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವೇ ಗೆಲ್ಲುವುದು. ಆದರೆ ಎಲ್ಲಿಯೋ ಮೋಸದ ಸುಳಿವು ಸಿಗುತ್ತಿಲ್ಲ, ಹೀಗಾಗಲು ತಾವು ಬಿಡುವುದಿಲ್ಲ ಎಂದಿದ್ದರು. ಚುನಾವಣೆಯಲ್ಲಿ ಮೋಸ ನಡೆದಿದ್ದು, ಅಮೆರಿಕ ಜನತೆಗೆ ವಂಚನೆ ಎಸಗಲಾಗಿದೆ. ನಾವು ಇದರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಎಚ್ಚರಿಸಿದ್ದಾರೆ.
ಟ್ರಂಪ್ ಹೇಳಿಕೆಗೆ ಜೋ ಬಿಡೆನ್ ತಿರುಗೇಟು ನೀಡಿ, ಒಂದು ವೇಳೆ ಟ್ರಂಪ್ ತಮ್ಮ ಬೆದರಿಕೆಯಂತೆ ನಡೆದುಕೊಂಡರೆ ನಮ್ಮ ಬಳಿಯು ಸಹ ಕಾನೂನು ತಂಡಗಳು ತಯಾರಿಯಲ್ಲಿವೆ. ಮತ ಎಣಿಕೆಯನ್ನು ನಿಲ್ಲಿಸುವ ಯತ್ನಕ್ಕೆ ಟ್ರಂಪ್ ಅವರು ಕೈಹಾಕಿದರೆ, ನಾವು ಸಹ ಅದಕ್ಕೆ ಪ್ರತಿರೋಧ ಒಡ್ಡಲು ಕಾನೂನು ತಂಡವನ್ನು ತಯಾರಿಯಲ್ಲಿ ಇಟ್ಟಿದ್ದೇವೆಂದು ಬಿಡೆನ್ ಕ್ಯಾಂಪೇನ್ ಮ್ಯಾನೇಜರ್ ಜೆನ್ ಒ ಮಲ್ಲೆ ಡಿಲ್ಲನ್ ಎಚ್ಚರಿಸಿದ್ದರು.
ಸದ್ಯದ ಟ್ರೆಂಡ್ ಪ್ರಕಾರ ಬಿಡೆನ್ ಅವರು 254 ಎಲೆಕ್ಟ್ರೋಲ್ ಮತಗಳೊಂದಿಗೆ ಭಾರಿ ಮುನ್ನಡೆ ಪಡೆದರೆ, ಟ್ರಂಪ್ 214 ಮತಗಳೊಂದಿಗೆ ಹಿನ್ನೆಡೆ ಅನುಭವಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಲು 538 ಮತಗಳ ಪೈಕಿ ಕನಿಷ್ಠ 270 ಎಲೆಕ್ಟ್ರೋಲ್ ಮತಗಳನ್ನು ಪಡೆಯುವ ಅಗತ್ಯ ಇದೆ. ಜೋ ಬಿಡೆನ್ಗೆ ಇನ್ನು ಆರು ಮತಗಳಷ್ಟೇ ಬಾಕಿ ಇದ್ದು, ಮುಂದಿನ ಅಧ್ಯಕ್ಷ ಗಾದಿಗೆ ಏರುವತ್ತ ಹೆಜ್ಜೆ ಹಾಕಿದ್ದಾರೆ. (ಏಜೆನ್ಸೀಸ್)