ಗೆಲುವಿನ ಸನಿಹದಲ್ಲಿ ಬಿಡೆನ್ ಛಲ ಬಿಡದ ಟ್ರಂಪ್

US Election
Published on

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮತ್ತು ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಗೆಲುವಿನ ಸನಿಹದಲ್ಲಿದ್ದಾರೆ. ಆದರೆ ಅಂಚೆ ಮತಪತ್ರ ಎಣಿಕೆ ವಿಳಂಬವಾಗಿರುವುದರಿಂದ ಫಲಿತಾಂಶ ತಡವಾಗಿದೆ. ಫಲಿತಾಂಶ ವಿಳಂಬವಾಗಿರುವ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಮುಂಚೂಣಿಯಲ್ಲಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಡೆಗಳಿಗೆವರೆಗೂ ಛಲದಿಂದ ಹೋರಾಟ ಮುಂದುವರಿಸಿದ್ದಾರೆ. ಈ ಮಧ್ಯೆ, ಅನೇಕ ರಾಜ್ಯಗಳಲ್ಲಿ ಟ್ರಂಪ್ ಬೆಂಬಲಿಗರು ಚುನಾವಣಾ ಅಕ್ರಮದ ದಾವೆ ದಾಖಲಿಸಿದ್ದಾರೆ. ಜತೆಗೆ ಉಭಯ ಅಭ್ಯರ್ಥಿಗಳ ಪರ ಮತ್ತು ವಿರೋಧ ಪ್ರತಿಭಟನೆ ಮುಂದುವರಿದಿದೆ.

ನಿಧಾನವಾಗಿ ಹೆಚ್ಚುತ್ತಿರುವ ಬಿಡೆನ್ ಮತ

‘ಸ್ವಿಂಗ್ ರಾಜ್ಯ’ದಲ್ಲಿ ಪ್ರಮುಖವಾದ ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್​ಗಿಂತ ಬಿಡೆನ್ 7 ಸಾವಿರ ಮುನ್ನಡೆ ಸಾಧಿಸಿದ್ದಾರೆ. 3.19 ಲಕ್ಷ ಮತಗಳ ಮುನ್ನಡೆಯಲ್ಲಿದ್ದ ಟ್ರಂಪ್, ಗುರುವಾರದ ಅಂತ್ಯದ ಹೊತ್ತಿಗೆ 18 ಸಾವಿರಕ್ಕೆ ಕುಸಿತಕಂಡಿದ್ದರು. ಈ ರಾಜ್ಯದಲ್ಲಿ ಟ್ರಂಪ್ ಶೇ. 49.5 ಮತ್ತು ಬಿಡೆನ್ ಶೇ. 49.4 (ಅಂತರ ಶೇ. 0.1) ಮತಗಳಿಸಿದ್ದಾರೆ. ಶೇ. 98ರಷ್ಟು ಮತ ಎಣಿಕೆ ಪೂರ್ಣಗೊಂಡಿದೆ. ಜಾರ್ಜಿಯಾದಲ್ಲಿ ಶುಕ್ರವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗುವ ಹೊತ್ತಿಗೆ ಬಿಡೆನ್ 2 ಸಾವಿರ ಮುನ್ನಡೆ ಪಡೆದಿದ್ದಾರೆ. ಇಲ್ಲಿ 68 ಸಾವಿರ ಮುನ್ನಡೆಯಲ್ಲಿದ್ದ ಟ್ರಂಪ್, ಗುರುವಾರ ಅಂತ್ಯದ ಹೊತ್ತಿಗೆ ನಾಲ್ಕು ಸಾವಿರಕ್ಕೆ ಇಳಿಕೆಕಂಡಿದ್ದರು. ಬಿಡೆನ್ ಮತ್ತು ಟ್ರಂಪ್ ಇಬ್ಬರೂ ಶೇ. 49.4ರಷ್ಟು ಮತಗಳಿಸಿದ್ದು, ಶೇ. 99 ಮತ ಎಣಿಕೆ ಮುಗಿದಿದೆ. ತೀಕ್ಷ್ಣ ಸ್ಪರ್ಧೆ ಇರುವ ನವಾಡದಲ್ಲಿ ಬಿಡೆನ್ 12 ಸಾವಿರ ಮತಗಳಿಂದ ಮುಂದಿದ್ದಾರೆ. ಇಲ್ಲಿ ಬಿಡೆನ್ ಶೇ.49.4 ಮತ್ತು ಟ್ರಂಪ್ ಶೇ. 48.5 ಮತಗಳನ್ನು ಗಳಿಸಿದ್ದು. ಅಂತರದ ಪ್ರಮಾಣ ಶೇ. 0.9ರಲ್ಲಿ ಪೈಪೋಟಿ ಮುಂದುವರಿದಿದೆ. ಅಲಸ್ಕಾದಲ್ಲಿ ಟ್ರಂಪ್​ಗೆ ಶೇ. 62 ಮತ್ತು ಬಿಡೆನ್​ಗೆ ಶೇ. 33.5 ಮತ ಪ್ರಾಪ್ತಿಯಾಗಿದ್ದರೂ ಇಲ್ಲಿ ಇನ್ನೂ ಅಧಿಕೃತವಾಗಿ ಫಲಿತಾಂಶ ಹೊರಬಿದ್ದಿಲ್ಲ. ಉತ್ತರ ಕರೋಲಿನಾದಲ್ಲಿ ಟ್ರಂಪ್ ಶೇ. 50 ಮತ್ತು ಬಿಡೆನ್ ಶೇ. 48.7ರಷ್ಟು ಬೆಂಬಲ ಪಡೆದಿದ್ದಾರೆ. ಇಲ್ಲೂ ಮತ ಎಣಿಕೆ ಪೂರ್ಣಗೊಂಡಿದೆ. ಮತ್ತೊಂದು ಪ್ರಮುಖ ರಾಜ್ಯ ಅರಿಜೋನಾದಲ್ಲಿ ಬಿಡೆನ್ ಮುನ್ನಡೆ 93 ಸಾವಿರದಿಂದ 65 ಸಾವಿರಕ್ಕೆ ಇಳಿದರೂ ಶೇ. 50 ಮತಗಳಿಸಿ ಸುರಕ್ಷಿತವಾಗಿದ್ದಾರೆ. ಇಲ್ಲಿ ಟ್ರಂಪ್​ಗೆ ಶೇ. 48.5ರಷ್ಟು ಮತಪ್ರಾಪ್ತಿಯಾಗಿದೆ. ಮತ ಎಣಿಕೆ ಪೂರ್ಣಗೊಂಡಿದೆ.

ಸ್ವಿಂಗ್ ನೀಡಿದ 3 ರಾಜ್ಯ

ವಿಸ್ಕಾನ್ಸಿನ್, ಅರಿಜೋನಾ ಮತ್ತು ಮಿಚಿಗನ್ ರಾಜ್ಯಗಳು ಜೋ ಬಿಡೆನ್​ಗೆ ‘ಸ್ವಿಂಗ್’ ನೀಡಿದ ರಾಜ್ಯಗಳಾಗಿವೆ. ಕ್ರಮವಾಗಿ ಈ ರಾಜ್ಯಗಳ 10, 11, 16 ಎಲೆಕ್ಟೋರಲ್ ಕಾಲೇಜುಗಳ ಬೆಂಬಲವನ್ನು ಅವರು ಪಡೆದಿದ್ದಾರೆ. 2016ರಲ್ಲಿ ಈ ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದಿದ್ದರು. ಪೆನ್ಸಿಲ್ವೇನಿಯಾ 20, ಜಾರ್ಜಿಯಾ 16 ಮತ್ತು ನವಾಡಗಳ 6 ಎಲೆಕ್ಟೋರಲ್ ಕಾಲೇಜುಗಳಿದ್ದು, ಯಾವುದೇ ರಾಜ್ಯದಲ್ಲಿ ಬಿಡೆನ್ ಗೆದ್ದರೂ ವಿಜಯಮಾಲೆ ಅವರ ಕೊರಳಿಗೆ ಬೀಳಲಿದೆ. 2016ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಜಯಗಳಿಸಿದ್ದರು.

ಪೆನ್ಸಿಲ್ವೇನಿಯಾ ಜೋ ಬಿಡೆನ್ ಪರವಾಗಿದೆ. ಇಲ್ಲಿನ ಎಲೆಕ್ಟೋರಲ್ ಕಾಲೇಜುಗಳು ಅವರನ್ನು ಬೆಂಬಲಿಸಿವೆ. | ಡಿಸಿಷನ್ ಡೆಸ್ಕ್ ಎಚ್​ಕ್ಯೂ (ಚುನಾವಣಾ ತಜ್ಞರ ಗುಂಪು)

ಕಾಂಗ್ರೆಸ್​ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳ

ಕಾಂಗ್ರೆಸ್​ನ ಉಭಯ ಸದನಗಳಿಗೆ ನಡೆದ (ಸೆನೆಟ್​ನ 35 ಸ್ಥಾನ, ಹೌಸ್ ಆಫ್ ರೆಪ್ರಸೆಂಟಟೀವ್ಸ್​ನ 435 ಸ್ಥಾನ) ಮಧ್ಯಂತರ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಡೆಮಾಕ್ರಟಿಕ್ ಪಕ್ಷದಿಂದ 100 ಮತ್ತು ರಿಪಬ್ಲಿಕನ್ ಪಕ್ಷದಿಂದ 31 ಮಹಿಳೆಯರು ಜಯಗಳಿಸಿದ್ದು, 117ನೇ ಕಾಂಗ್ರೆಸ್​ನ ಸದಸ್ಯರಾಗಿದ್ದಾರೆ ಎಂದು ರಟ್ಜರ್ಸ್ ವಿವಿಯ ಅಮೆರಿಕದ ಮಹಿಳೆಯರು ಮತ್ತು ರಾಜಕೀಯ ಕೇಂದ್ರ (ಸಿಎಡಬ್ಲ್ಯೂಪಿ) ಹೇಳಿದೆ. ಹೌಸ್ ಆಫ್ ರೆಪ್ರೆಸಂಟಟೀವ್ಸ್​ಗೆ (ಸಂಸತ್​ನ ಕೆಳಮನೆ) 83 ಡೆಮಾಕ್ರಟರು ಮತ್ತು 23 ರಿಪಬ್ಲಿಕನ್ಸ್ ಮಹಿಳೆಯರು (ಒಟ್ಟು 106) ಆಯ್ಕೆ ಆಗುವ ಮೂಲಕ ಹಾಲಿ ಸದನದ (102 ಮಹಿಳಾ ಸದಸ್ಯರು) ದಾಖಲೆಯನ್ನು ಮುರಿದಿದೆ. ಈ ಸಾರಿ 583 ಮಹಿಳೆಯರು ಸಂಸತ್​ನ ಕೆಳಮನೆಗೆ ಸ್ಪರ್ಧಿಸಿದ್ದರು, ಇನ್ನೂ 29 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಬೇಕಿರುವ ಕಾರಣ ಮಹಿಳಾ ಸದಸ್ಯರ ಸಂಖ್ಯೆ ಮತ್ತಷ್ಟು ಏರಬಹುದು ಎಂದು ಸಿಎಡಬ್ಲ್ಯೂಪಿ ತಿಳಿಸಿದೆ.

ಕೋಪ ನಿರ್ವಹಿಸುವುದನ್ನು ಟ್ರಂಪ್ ಕಲಿಯಬೇಕಿದೆ. ಸ್ನೇಹಿತರೊಂದಿಗೆ ಹಳೆಯ ಸಿನಿಮಾ ನೋಡಿ ಚಿಲ್ ಡೊನಾಲ್ಡ್ ಚಿಲ್ | ಗ್ರೇತಾ ಥುನ್​ಬರ್ಗ್​ಹವಾಮಾನ ಬದಲಾವಣೆಯ ಹೋರಾಟಗಾರ್ತಿ (ಕಳೆದ ವರ್ಷ ಗ್ರೇತಾರನ್ನು ಟ್ರಂಪ್ ಅಣಕ ಮಾಡಿದ್ದರು)

ಹಲವು ರಾಜ್ಯಗಳಲ್ಲಿ ದಾವೆ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಜಾರ್ಜಿಯಾ, ಮಿಚಿಗನ್, ನವಾಡ, ಪೆನ್ಸಿಲ್ವೇನಿಯಾ ಸೇರಿ ಹಲವು ರಾಜ್ಯಗಳಲ್ಲಿ ಚುನಾವಣಾ ಅಕ್ರಮದ ದಾವೆ ಹೂಡಿದ್ದಾರೆ. ಈ ಪೈಕಿ ಪೆನ್ಸಿಲ್ವೇನಿಯಾದಲ್ಲಿ ಮತ ಎಣಿಕೆ ಕೇಂದ್ರದಲ್ಲಿ ರಿಪಬ್ಲಿಕನ್ ಪಕ್ಷದ ಏಜೆಂಟ್​ಗಳಿಗೆ ಆರು ಅಡಿ ಅಂತರದಲ್ಲಿ ಎಣಿಕೆ ಕಾರ್ಯ ವೀಕ್ಷಣೆಗೆ ಅವಕಾಶ ನೀಡಬೇಕು ಎಂದು ಸ್ಥಳೀಯ ಕೋರ್ಟ್ ಆದೇಶಿಸಿದೆ. ಜಾರ್ಜಿಯಾ ಮತ್ತು ಮಿಚಿಗನ್​ಗಳಲ್ಲಿ ದಾವೆ ವಜಾಗೊಂಡಿದೆ.

ಟ್ರಂಪ್​ಗಿಂತ ಬಿಡೆನ್ 30.90 ಲಕ್ಷ ಪ್ಯಾಪುಲರ್ ಮತಗಳನ್ನು ಹೆಚ್ಚಿಗೆ ಪಡೆದಿದ್ದಾರೆ. 2016ರಲ್ಲಿ ಟ್ರಂಪ್​ಗಿಂತ ಹಿಲರಿ ಕ್ಲಿಂಟನ್ 30 ಲಕ್ಷ ಅಧಿಕ ಮತ ಪಡೆದಿದ್ದದರೂ ಅಧ್ಯಕ್ಷೀಯ ಚುನಾವಣೆಗೆ ಎಲೆಕ್ಟೋರಲ್ ಕಾಲೇಜು ಬೆಂಬಲವೇ ನಿರ್ಣಾಯಕವಾಗಿದ್ದರಿಂದ ಟ್ರಂಪ್ ಅಧ್ಯಕ್ಷರಾದರು.

ಪ್ರಜಾತಂತ್ರ ಒಮ್ಮೊಮ್ಮೆ ಗೊಂದಲಮಯದ ರೀತಿ ಕಾಣುತ್ತದೆ. ಆದರೆ. ಯಾರಿಂದಲೂ ಪ್ರಜಾಪ್ರಭುತ್ವ ಕಸಿದುಕೊಳ್ಳಲು ಆಗದು. ನಮ್ಮ ಸ್ಥಿತಿ ನಿನ್ನೆಗಿಂತಲೂ ಉತ್ತಮವಾಗಿದೆ. ಕಮಲಾ ಹ್ಯಾರಿಸ್ ಮತ್ತು ನಾನು ಗೆಲ್ಲುವುದರಲ್ಲಿ ಯಾವುದೇ ಸಂಶಯ ಇಲ್ಲ. | ಜೋ ಬಿಡೆನ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮತ್ತು ಮಾಜಿ ಉಪಾಧ್ಯಕ್ಷ

ಮತ ಎಣಿಕೆ ನಿಲ್ಲಿಸಿ

ಶ್ವೇತಭವನ ಮಾಧ್ಯಮ ಕೋಣೆಯಲ್ಲಿ ಗುರುವಾರ 15 ನಿಮಿಷ ಕಾಣಿಸಿಕೊಂಡ ಅಧ್ಯಕ್ಷ ಟ್ರಂಪ್, ‘ಚುನಾವಣೆಯನ್ನು ಕಬಳಿಸಲಾಗುತ್ತಿದೆ, ಮತ ಎಣಿಕೆ ನಿಲ್ಲಿಸಿ’ ಎಂದು ಒತ್ತಾಯಿಸಿದರು. ಕಾನೂನಾತ್ಮಕ ಮತಗಳನ್ನಷ್ಟೆ ಎಣಿಕೆ ಮಾಡಿದ್ದರೆ ನಮಗೆ ಸುಲಭವಾಗಿ ಜಯದೊರೆಯುತ್ತಿತ್ತು. ಆದರೆ, ನಾವು ಇದನ್ನು ಇಷ್ಟಕ್ಕೆ ಬಿಡುವುದಿಲ್ಲ. ಚುನಾವಣಾ ಅಕ್ರಮಗಳ ವಿರುದ್ಧ ಸುಪ್ರೀಂಕೋರ್ಟ್​ವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವ ವ್ಯವಧಾನವೂ ಇಲ್ಲದೆ ನಿರ್ಗಮಿಸಿದರು. ಮತ ಎಣಿಕೆ ನಿಲ್ಲಿಸಲು ಅಧ್ಯಕ್ಷರು ಮಾಡಿರುವ ಆಗ್ರಹವನ್ನು ರಿಪಬ್ಲಿಕನ್ ಪಕ್ಷದ ಅನೇಕ ಸಂಸದರು ವಿರೋಧಿಸಿದ್ದಾರೆ. ವಂಚನೆ ಆಗಿದೆ ಎಂಬುದಕ್ಕೆ ಪುರಾವೆ ಇದ್ದಾರೆ ಕೋರ್ಟ್​ಗೆ ಹೋಗಲಿ. ಅದನ್ನು ಬಿಟ್ಟು, ಮತ ಎಣಿಕೆಯನ್ನೇ ನಿಲ್ಲಿಸಿ ಎಂದು ಹೇಳುವುದು ಹುಚ್ಚಾಟ ಎಂದು ಸಂಸದ ಆಡಂ ಕಿನ್ಜಿಂಜರ್ ಹೇಳಿದ್ದಾರೆ. ಮಂಗಳವಾರ ರಾತ್ರಿ 2.30ಕ್ಕೆ ಶ್ವೇತಭವನದಲ್ಲಿ ಮಾತನಾಡಿದ್ದ ಟ್ರಂಪ್, ಗೆಲವು ನಮ್ಮದೆ. ಫಲಿತಾಂಶವಷ್ಟೆ ಪ್ರಕಟವಾಗಬೇಕಿದೆ. ಮತಪತ್ರದಲ್ಲಿ ವಂಚನೆ ಆಗಿದೆ. ತಡವಾಗಿ ಬಂದ ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತಿದೆ ಎಂದು ಗುಟುರು ಹಾಕಿದ್ದರು. ಟ್ರಂಪ್ ವಿಜಯ ಘೋಷಣೆಗೆ ಸ್ವಪಕ್ಷೀಯರು ಸೇರಿ ಅನೇಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮತದಾನದಿಂದ ಈವರೆಗೆ ಟ್ರಂಪ್ ನೀಡಿರುವ ಹೇಳಿಕೆ, ಮಾಡಿರುವ ಟ್ವೀಟ್​ಗಳನ್ನು ವಿಶ್ಲೇಷಿಸಿರುವ ಅಮೆರಿಕದ ಟ್ರಂಪ್​ರನ್ನು ಸುಳ್ಳುಗಳ ಸರದಾರನೆಂದು ಹೀಯಾಳಿಸಿವೆ ಮತ್ತು ಮಾಧ್ಯಮಗಳು ಸುದ್ದಿಗೋಷ್ಠಿ ಬಹಿಷ್ಕರಿಸಿ ಹೊರಹೋಗಿವೆ.

ಈಗ ನಡೆಯುತ್ತಿರುವುದು ಕಾನೂನಾತ್ಮಕವಾಗಿಲ್ಲ. ಆದರೆ ನಾನು ವಿಷಣ್ಣನಾಗಿಲ್ಲ. ಹಾದಿ ಕಠಿಣವಾಗಿದ್ದರೂ ಹೋರಾಟ ನಿಲ್ಲಿಸಿಲ್ಲ. ಈ ಚುನಾವಣೆ ಇನ್ನೂ ಮುಗಿದಿಲ್ಲ. ನಮಗೆ ಪ್ರಾಮಾಣಿಕ ಫಲಿತಾಂಶ ಬೇಕಿದೆ. | ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ

120 ವರ್ಷದ ನಂತರ ಅತಿ ಹೆಚ್ಚು ಮತದಾನ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿ 120 ವರ್ಷಗಳ ನಂತರ ಅತಿ ಹೆಚ್ಚು ಮತದಾನ ಈ ಚುನಾವಣೆಯಲ್ಲಿ ನಡೆದಿದೆ. ಸುಮಾರು 24 ಕೋಟಿ ಮತದಾರರ ಪೈಕಿ, 16 ಕೋಟಿಯಷ್ಟು ಮಂದಿ ಹಕ್ಕನ್ನು ಚಲಾಯಿಸಿದ್ದಾರೆ. ಇವರಲ್ಲಿ 10 ಕೋಟಿಯಷ್ಟು ಜನರು ಪೂರ್ವ ಮತದಾನ ಮಾಡಿದ್ದಾರೆ (ನ. 3ಕ್ಕೂ ಮೊದಲು). ಒಟ್ಟಾರೆ ಶೇ. 67ರಷ್ಟು ಮತದಾನವಾಗಿದೆ. 1900ರ ಚುನಾವಣೆಯಲ್ಲಿ ಶೇ.73.7ರಷ್ಟು ಮತದಾನ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net