

ವಾಷಿಂಗ್ಟನ್: ಕರೊನಾ ವೈರಸ್ ವಿಚಾರದಲ್ಲಿ ಚೀನಾ ಮತ್ತು ಅಮೆರಿಕ ಆರೋಪ-ಪ್ರತ್ಯಾರೋಪ ಮಾಡಿಕೊಂಡಿವೆ. ಕರೊನಾ ಹರಡಿದ್ದು ಅಮೆರಿಕದಿಂದ, ಯುಎಸ್ ಸೇನೆಯೇ ವೈರಸ್ನ್ನು ತಂದು ಚೀನಾದಲ್ಲಿ ಹಾಕಿದೆ ಎಂದು ಚೀನಾ ಸರ್ಕಾರ ಹೇಳಿತ್ತು. ಅದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ತೀವ್ರ ತಿರುಗೇಟು ನೀಡಿತ್ತು.
ಇದೀಗ ಅಮೆರಿಕ ವಿದೇಶಾಂಗ ಖಾತೆಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರು ಕರೊನಾ ವಿಚಾರವಾಗಿ ರಷ್ಯಾ, ಚೀನಾ ಮತ್ತು ಇರಾನ್ ದೇಶ್ಗಳನ್ನು ದೂಷಿಸಿದ್ದಾರೆ.
ಕರೊನಾ ವೈರಸ್ ಜಾಗತಿಕ ಸಾಂಕ್ರಾಮಿಕ ರೋಗವಾಗಿದೆ. ಇದರ ಗಂಭೀರತೆಯನ್ನು ಅರಿಯದೆ ಚೀನಾ, ರಷ್ಯಾ ಮತ್ತು ಇರಾನ್ಗಳು ಕಾಯಿಲೆಯ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುತ್ತಿವೆ. ಅಲ್ಲದೆ, ಕರೊನಾ ನಿಯಂತ್ರಣಕ್ಕೆ ಗಂಭೀರವಾಗಿ ಪ್ರಯತ್ನ ಮಾಡುತ್ತಿರುವ ಅಮೆರಿಕಕ್ಕೆ ಕೆಟ್ಟ ಹೆಸರು ತರಲು ಸಂಘಟಿತವಾಗಿವೆ ಎಂದು ಮೈಕ್ ಆರೋಪ ಮಾಡಿದ್ದಾರೆ.
ವೈಟ್ ಹೌಸ್ನಲ್ಲಿ ಮಾತನಾಡಿದ ಅವರು, ಕರೊನಾ ವೈರಸ್ ಕುರಿತಂತೆ ಟ್ವಿಟರ್ ಸೇರಿ ಜಗತ್ತಿನ ಸಾಮಾಜಿಕ ಜಾಲತಾಣಗಳಲ್ಲಿ ಹಲವು ತಪ್ಪು ಮಾಹಿತಿಗಳು ಹರಡುತ್ತಿವೆ. ಟ್ವಿಟರ್ನಲ್ಲಿ ಕೆಲವು ವ್ಯಕ್ತಿಗಳು ಇಲ್ಲಸಲ್ಲದ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಹಾಗೇ ರಷ್ಯಾ, ಚೀನಾ ಮತ್ತು ಇರಾನ್ ದೇಶಗಳು ಕರೊನಾ ವಿರುದ್ಧ ಹೋರಾಡುತ್ತಿರುವ ಅಮೆರಿಕದ ಪ್ರಯತ್ನಗಳನ್ನು ಅವಮಾನಿಸುವ ಕೆಲಸ ಮಾಡುತ್ತಿದೆ. ಎಲ್ಲವನ್ನೂ ನಂಬಬೇಡಿ. ನಂಬಲರ್ಹ ಮೂಲಗಳಿಂದ ಹೊರಬೀಳುವ ವಿಷಯಗಳ ಬಗ್ಗೆ ಮಾತ್ರ ಗಮನವಿರಲಿ ಎಂದು ಅಮೆರಿಕದ ನಾಗರಿಕರಿಗೆ ಕಿವಿಮಾತು ಹೇಳಿದ್ದಾರೆ. ಅದರಲ್ಲೂ ರಷ್ಯಾ, ಚೀನಾ ಮತ್ತು ಇರಾನ್ಗಳಂತೂ ತಪ್ಪು ಮಾಹಿತಿ ಪ್ರಸರಣದ ಅಭಿಯಾನವನ್ನೇ ಶುರುಮಾಡಿವೆ ಎಂದು ದೂಷಿಸಿದ್ದಾರೆ.
ಕರೊನಾ ವಿರುದ್ಧದ ಹೋರಾಟ ಒಂದು ಸವಾಲು ಎಂದು ಹೇಳಿರುವ ಮೈಕ್, ಯಾರೂ ಹೆದರಬೇಡಿ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್)