ಯುರಾಲಜಿ ಚಿಕಿತ್ಸೆಗಿಲ್ಲ ಉಪಕರಣ

16-klr-50 SNR
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ

ನಗರದ ಎಸ್​ಎನ್​ಆರ್​ ಆಸ್ಪತ್ರೆಯಲ್ಲಿನ ಯುರಾಲಜಿ ವಿಭಾಗಕ್ಕೆ ಬರುವ ರೋಗಿಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಆದರೆ, ಸಕಾಲಕ್ಕೆ ಸಲಕರಣೆ ದೊರೆಯದಿರುವುದು ಸೇವೆ ನೀಡಲು ಅಡಚಣೆಯಾಗಿದೆ.

ವಿವಿಧ ಕಾರಣಗಳಿಂದ ಮೂತ್ರಪಿಂಡ ಸಂಬಂಧಿತ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಗರ ಸೇರಿ ವಿವಿಧ ತಾಲೂಕುಗಳಿಂದಲೂ ಮೂತ್ರಪಿಂಡ, ಮೂತ್ರಕೋಶ ಸಮಸ್ಯೆಗಳ ಚಿಕಿತ್ಸೆ ಸಂಬಂಧ ಎಸ್​ಎನ್​ಆರ್​ಗೆ ವರ್ಷಕ್ಕೆ 6,000ಕ್ಕೂ ಹೆಚ್ಚು ರೋಗಿಗಳು ಬರುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಲು ಕೊರತೆಯಿರುವ ಉಪಕರಣಗಳನ್ನು ಸರಬರಾಜು ಮಾಡುವಂತೆ ಆಸ್ಪತ್ರೆ ಶಸ್ತ್ರಚಿಕಿತ್ಸಕರಿಗೆ ಸಂಬಂಧಿತ ವೈದ್ಯರು ಹಲವು ಬಾರಿ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಈ ಪರಿಣಾಮ ರೋಗಿಗಳು ಪರದಾಡುವ ಸನ್ನಿವೇಶ ಸೃಷ್ಟಿಯಾಗಿದೆ.

* ರೋಗಿಗಳ ಸಂಖ್ಯೆ ಹೆಚ್ಚಳ

ಕಳೆದ 2022ರಲ್ಲಿ 5,884, 2023ರಲ್ಲಿ 6,000, 2024ರಲ್ಲಿ 6,161 ಹೀಗೆ ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಗಮಿಸುವವರ ಪೈಕಿ ಶೇ.35ರಿಂದ ಶೇ.40 ಮಂದಿಗೆ ಶಸ್ತ್ರ ಚಿಕಿತ್ಸೆಯೂ ಲಭ್ಯವಾಗುತ್ತದೆ. ಉತ್ತಮ ಸೇವೆ ಸಲ್ಲಿಸಲು ವೈದ್ಯರು ಸಿದ್ಧರಿದ್ದು, ತಿಂಗಳಿಗೆ 8 ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಲೇಬೇಕು ಎಂಬ ಗುರಿ ಮೀರಿ ಸಾಧನೆ ಮಾಡಲಾಗುತ್ತಿದೆ. ಆದರೆ ಅಗತ್ಯ ಸವಲತ್ತುಗಳು ದೊರೆಯದಿರುವುದು ವೈದ್ಯರ ಅಸಮಾಧಾನಕ್ಕೂ ಕಾರಣವಾಗಿದೆ.

* 6 ವರ್ಷಗಳ ಹಿಂದೆ ಸ್ಥಾಪನೆ

ಕಿಡ್ನಿ ಕಲ್ಲುಗಳಿಗೆ ಲೇಸರ್​ ಸರ್ಜರಿ, ಪ್ರೊಸ್ಟೇಟ್​ ಸಮಸ್ಯೆ, ಮೂತ್ರ ವಿಸರ್ಜನೆ ತೊಂದರೆ, ಕಿಡ್ನಿ ಕ್ಯಾನ್ಸರ್​, ಮೂತ್ರ ಕೋಶ ಮತ್ತು ಪ್ರೊಸ್ಟೇಟ್​ ಕ್ಯಾನ್ಸರ್​, ಮೂತ್ರದಲ್ಲಿ ಸೋಂಕು, ಮೂತ್ರದಲ್ಲಿ ರಕ್ತ, ಮೂತ್ರನಾಳದ ಸೋಂಕು, ಜನ್ಮಜಾತ ಕಿಡ್ನಿ ಸಮಸ್ಯೆ, ಮೂತ್ರ ಸೋರುವಿಕೆ, ಕಿಡ್ನಿ ವೈಲ್ಯ ಮತ್ತು ಡಯಾಲಿಸಿಸ್​, ಪುರುಷ ಬಂಜೆತನ, ಲೈಂಗಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಯುರಾಲಜಿ ವಿಭಾಗ ಇರಲಿಲ್ಲ. ಇಲ್ಲಿಗೆ ಬರುತ್ತ್ತಿದ್ದ ರೋಗಿಗಳನ್ನು ಆರ್​.ಎಲ್​.ಜಾಲಪ್ಪ ಆಸ್ಪತ್ರೆ, ಬೆಂಗಳೂರಿನ ವಿಕ್ಟೋರಿಯಾ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಶಿಾರಸು ಮಾಡಲಾಗುತ್ತಿತ್ತು. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕಾಲಕ್ಕೆ ತಕ್ಕಂತೆ ವಿಭಾಗವನ್ನು 6 ವರ್ಷಗಳ ಹಿಂದೆ ಪ್ರಾರಂಭಿಸಿ, ತಜ್ಞ ಯುರಾಲಜಿಸ್ಟ್​ಗಳನ್ನೂ ನೇಮಕ ಮಾಡಲಾಗಿದೆ. ಯುರಾಲಜಿ ಚಿಕಿತ್ಸೆ ಬಹಳ ದುಬಾರಿಯಾಗಿರುವುದರಿಂದ ಸರ್ಕಾರಿ ಆಸ್ಪತ್ರೆಗೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅವರಿಗಾಗಿ ಒಂದು ವಾರ್ಡಿನಲ್ಲಿ 30 ಬೆಡ್​ ಸಹ ಮೀಸಲಿರಿಸಲಾಗಿದೆ. ಅಗತ್ಯ ಸೌಲಭ್ಯ ಒದಗಿಸಿದರೆ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಕಲ್ಪಿಸಲು ಸಹಕಾರಿಯಾಗುತ್ತದೆ ಎಂಬುದು ವೈದ್ಯರ ಮಾತು.

* "ಮೂತ್ರಪಿಂಡ ಸಮಸ್ಯೆ' ತಡೆಗೆ ಜಾಗೃತಿ ಅಗತ್ಯ

ಮೂತ್ರಪಿಂಡ ಸೂಕ್ಷ$್ಮ ಅಂಗವಾಗಿದ್ದು, ರಕ್ತ ಶುದ್ಧಿಕಾರ್ಯದ ನಂತರ ಮೂತ್ರದ ಮೂಲಕ ದೇಹದಲ್ಲಿನ ತ್ಯಾಜ್ಯವನ್ನು ಹೊರ ಹಾಕಲು ಮೂತ್ರಪಿಂಡ ಸಹಕಾರಿಯಾಗಿದೆ. ದೇಹದಲ್ಲಿನ ಲವಣಾಂಶ, ನೀರಿನಾಂಶ, ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಸಮತೋಲನದಲ್ಲಿ ಇರಿಸುತ್ತದೆ. ಆದರೆ ಈ ಬಗ್ಗೆ ಜನರಿಗೆ ಅಷ್ಟಾಗಿ ಜಾಗೃತಿಯಿಲ್ಲ. ಪರಿಣಾಮ ಆರೋಗ್ಯದ ಕಡೆಗೆ ಹೆಚ್ಚಿನವರು ಗಮನಹರಿಸದೆ ಸಮಸ್ಯೆ ತಂದುಕೊಳ್ಳುತ್ತಿದ್ದಾರೆ. ಕಾಯಿಲೆಗೆ ಒಳಗಾಗಿ ಚಿಕಿತ್ಸೆಗಾಗಿ ಆಗಮಿಸುವ ರೋಗಿಗಳಿಗೆ ಚಿಕಿತ್ಸೆ ನೀಡುವ ಜತೆಗೆ ಜಾಗೃತಿ ಸಹ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಯುರಾಲಜಿಸ್ಟ್​ ಡಾ.ಸೋಮಶೇಖರ್​.

* ನಿರ್ಲಕ್ಷ್ಯ ಸಲ್ಲ

ಪೌಷ್ಟಿಕ ಆಹಾರ ಸೇವನೆ, ಉತ್ತಮ ಜೀವನ ಶೈಲಿ, ಪ್ರತಿದಿನ ವ್ಯಾಯಾಮ, ಯೋಗ ಅಳವಡಿಸಿಕೊಳ್ಳಬೇಕು. ಈಗಾಗಲೇ ಮೂತ್ರಪಿಂಡ ಸಮಸ್ಯೆಯೂ ತೀವ್ರವಾದರೆ ನಿಯಮಿತವಾಗಿ ಡಯಾಲಿಸಿಸ್​ ಮಾಡಿಕೊಳ್ಳುವ ಹಂತಕ್ಕೆ ತಲುಪಬೇಕಾಗುತ್ತದೆ. ಸಮಸ್ಯೆ ಗಂಭೀರಗೊಳ್ಳುವ ಮೊದಲೇ ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

* ಪತ್ರ ಬರೆದರೂ ಪ್ರತಿಕ್ರಿಯೆ ಇಲ್ಲ

ಯುರಾಲಜಿ ವೈದ್ಯರ ಬಳಿ ಚಿಕಿತ್ಸೆಗೆ ಬರುವರ ರೋಗಿಗಳ ಪೈಕಿ ಕೆಲವರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿರುತ್ತದೆ. ಜತೆಗೆ ಅಗತ್ಯ ಔಷಧಗಳೂ ಬೇಕು. ಶಸ್ತ್ರ ಚಿಕಿತ್ಸೆಗೂ ಮುನ್ನ ರಕ್ತ ಪರೀೆ ಮಾಡಿಸಬೇಕು. ಇದಕ್ಕೆ ಸಂಬಂಧಿಸಿದ ಕೆಲ ಪರೀೆಗಳು ಆಸ್ಪತ್ರೆಯಲ್ಲಿ ಇಲ್ಲದೆ ಇರುವುದರಿಂದ ಬಡವರು ಹೊರಗಡೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಶಸ್ತ್ರ ಚಿಕಿತ್ಸೆಗೆ ಬೇಕಾಗಿರುವ ಸಲಕರಣೆಗಳು ಇಲ್ಲದಿರುವುದಿಂದ ಎಬಿಆರ್​ಕೆ ಅಡಿಯಲ್ಲಿ ಸರ್ಜರಿ ಮಾಡಲು ಆಗುತ್ತಿಲ್ಲ. ಆದ್ದರಿಂದ 17 ಉಪಕರಣಗಳನ್ನು ಖರೀದಿ ಮಾಡಿ ಜತೆಗೆ "ಮೊಡಲರ್​ ಒಟಿ' ಕಲ್ಪಿಸಲು ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರಿಗೆ ಡಾ.ಸೋಮಶೇಖರ್​ ಅವರು 6 ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂಬ ಆರೋಪ ಇದೆ. ಈ ಮಧ್ಯೆ ವಿಭಾಗಕ್ಕೆ ಪ್ರತಿ ದಿನ 80ರಿಂದ 100 ಮಂದಿ ರೋಗಿಗಳು ಆಗಮಿಸುತ್ತಾರೆ. ಅವರನ್ನು ನಿಯಂತ್ರಣ ಮಾಡಲು ಸಿಬ್ಬಂದಿ ಕೊರತೆ ಸಹ ಕಾಡುತ್ತಿದೆ.

* ಬೇಕಾಗಿರುವ ಉಪಕರಣಗಳೇನು..?

ಟೆಲಿಸ್ಕೋಪ್​, 19 ಎ್​ ಸೈಟೋಸ್ಕೋಪ್​, ಮೂತ್ರನಾಳ ದರ್ಶನ, ಲೈಟ್​ ಸ್ಕೊರ್​, 3 ಚಿಪ್​ ಕ್ಯಾಮರಾ, ಆಧಿಕ ಅವರ್ತನ ಕೇಬಲ್​, ನ್ಯೂಮ್ಯಾಟಿಕ್​ ಲಿಥೊಟ್ರಿಪ್ಪರ್​, ಮೆಡಿಕಲ್​ ಗ್ರೇಡ್​ ಮಾನಿಟರ್​, ಯುರಾಲಜಿ ಒಟಿ ಟೇಬಲ್​, ಇಎಸ್​ಡಬ್ಲೂಎಲ್​ ಮಿಷನ್​, ಸ್ಟೋರ್​ ಪಂಚ್​ ಹೀಗೆ ವಿವಿಧ ಮಾದರಿಯ 17 ಉಪಕರಣಗಳು ಬೇಕಾಗಿದ್ದು, ಬೇಡಿಕೆ ಸಲ್ಲಿಸಲಾಗಿದೆ.

ಕೋಟ್​...

ಯುರಾಲಜಿ ವಿಭಾಗಕ್ಕೆ ಗಂಭೀರ ಸಮಸ್ಯೆಯಿರುವ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಶಸ್ತ್ರ ಚಿಕಿತ್ಸೆ ಮಾಡಬೇಕಾದರೆ ಉಪಕರಣಗಳ ಕೊರತೆಯಿದೆ. ಸಕಾಲಕ್ಕೆ ಕಲ್ಪಿಸಿದರೆ ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸಹಕಾರಿಯಾಗುತ್ತದೆ.

- ಡಾ.ಸೋಮಶೇಖರ್​, ಯುರಾಲಜಿ ತಜ್ಞ, ಎಸ್​ಎನ್​ಆರ್​ ಆಸ್ಪತ್ರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net