

ಸೊರಬ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಐಪಿಎಸ್ ಅಧಿಕಾರಿ ಎಡಿಜಿಪಿ ಚಂದ್ರಶೇಖರ್ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ತಾಲೂಕು ಜೆಡಿಎಸ್ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜೆಡಿಎಸ್ ಘಟಕದ ಹಿರಿಯ ಮುಖಂಡ ಬಾಸೂರು ಚಂದ್ರೇಗೌಡ ಮಾತನಾಡಿ, ಸರ್ಕಾರಿ ಹುದ್ದೆಯಲ್ಲಿದ್ದೇನೆ ಎಂಬ ಅಹಂಕಾರದಿಂದ ತಾನು ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆಯಿಂದ ಕೇಂದ್ರ ಸಚಿವ ಕುಮಾರಸ್ವಾಮಿಯವರ ವಿರುದ್ಧ ಕೀಳು ಮಟ್ಟದ ಪದ ಬಳಕೆ ಮಾಡಿ ದರ್ಪ ತೋರಿರುವ ಐಪಿಎಸ್ ಅಧಿಕಾರಿಯ ನಡೆ ಖಂಡನೀಯ ಎಂದರು.
ಉನ್ನತ ಹುದ್ದೆಯಲ್ಲಿರುವ ಐಜಿಪಿ ಚಂದ್ರಶೇಖರ್ ವಿರುದ್ಧ ಈಗಾಗಲೇ ಭೂ ಕಬಳಿಕೆ ವ್ಯವಹಾರದಲ್ಲಿ 20ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದರ ವಿರುದ್ಧ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಹಾಗೂ ಅವರ ಪತ್ನಿ ಹೆಸರಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ಸೇರಿದಂತೆ ಇವರ ಅಕ್ರಮಗಳ ಬಗ್ಗೆ ಹಲವು ದೂರುಗಳು ದಾಖಲಾಗಿವೆ. ರಾಜ್ಯ ಸರ್ಕಾರ ಇಂತಹ ಭ್ರಷ್ಟ ಅಧಿಕಾರಿಯನ್ನು ಸಮರ್ಥನೆ ಮಾಡಿಕೊಳ್ಳುವ ಬದಲು ಆತನ ಅಕ್ರಮ ಆಸ್ತಿಗಳ ತನಿಖೆ ನಡೆಸಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಂ.ಗಣಪತಿ, ಪ್ರಧಾನ ಕಾರ್ಯದರ್ಶಿ ರಾಮಪ್ಪ ಕೊಡಕಣಿ, ರೈತ ಮೋರ್ಚಾ ಅಧ್ಯಕ್ಷ ಶಿವಮೂರ್ತಿ, ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಕುಮಾರ್, ನಾಗರಾಜ್ ಗುಡ್ಡೆಕೊಪ್ಪ, ಗಣೇಶ, ಸುಧೀಂದ್ರಭಟ್, ವಿಷ್ಣು , ಮಹೇಶ್ ಹೆಗಡೆ, ಆನಂದ್. ಡಿ.ನಾಯಕ್ ಇದ್ದರು.