

ಶಿವಮೊಗ್ಗ: ಶಿಫಾರಸ್ಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಕೆ ಮಾಡಿದರೆ ಮುಂದಿನ ದಿನಗಳಲ್ಲಿ ಮೆಕ್ಕೆಜೋಳಕ್ಕೆ ರೋಗ ಮತ್ತು ಕೀಟ ಬಾಧೆ ಹೆಚ್ಚಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕಿ ಜಿ.ಸಿ.ಪೂರ್ಣಿಮಾ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ.58ರಷ್ಟು ಹೆಚ್ಚು ಮಳೆ ಬಿದ್ದಿದೆ. ವಿವಿಧ ಹಂತದಲ್ಲಿರುವ ಮೆಕ್ಕೆಜೋಳ ಬೆಳೆಗೆ ರೈತರಿಗೆ ಸಕಾಲದಲ್ಲಿ ಅಂತರ ಬೇಸಾಯ ಮತ್ತು ಯೂರಿಯಾ ಮೇಲುಗೊಬ್ಬರ ನೀಡಲು ಸಾಧ್ಯವಾಗಿಲ್ಲ. ಇದೀಗ ಮಳೆ ಪ್ರಮಾಣ ತಗ್ಗಿದೆ. ಹಾಗಾಗಿ ಮೆಕ್ಕೆಜೋಳಕ್ಕೆ ಮೇಲುಗೊಬ್ಬರವಾಗಿ ಯೂರಿಯಾವನ್ನು ಪ್ರತಿ ಎಕರೆಗೆ 65 ಕೆ.ಜಿ.ಯಂತೆ ಬಳಸುವಂತೆ ಅವರು ಸಲಹೆ ನೀಡಿದ್ದಾರೆ.
ಯೂರಿಯಾ ಜತೆಗೆ ಬಿಸಿಲಿನ ವಾತಾವರಣ ಮುಂದುವರಿದಲ್ಲಿ ನೀರಿನಲ್ಲಿ ಕರಗುವ 19:19:19 ರಸಗೊಬ್ಬರವನ್ನು ಪ್ರತಿ ಎಕರೆಗೆ 1 ಕೆಜಿಯಷ್ಟು 200 ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು. 25ರಿಂದ 30 ದಿನಗಳ ಬೆಳೆಗೆ ಮತ್ತು ಹೂವಾಡುವ ಹಂತದಲ್ಲಿ ನ್ಯಾನೊ ಯೂರಿಯಾ ದ್ರವವನ್ನು ಪ್ರತಿ ಲೀ. ನೀರಿಗೆ 4 ಮಿ.ಲೀ.ನಂತೆ ಮತ್ತು 8 ಗ್ರಾಂ ನೀರಿನಲ್ಲಿ ಕರಗುವ ಪೊಟ್ಯಾಶ್‌ನ್ನು ಸಿಂಪರಣೆ ಮಾಡುವುದರಿಂದ ಗಿಡಗಳು ಬೇಗನೆ ಚೇತರಿಸಿಕೊಳ್ಳುತ್ತವೆ ಎಂದಿದ್ದಾರೆ.
ರಸಗೊಬ್ಬರ ಕೊರತೆ ಇಲ್ಲ: ಜಿಲ್ಲೆಗೆ ಬೇಡಿಕೆಗೆ ಅನುಗುಣವಾಗಿ ಯೂರಿಯ ಮತ್ತು ಇತರೆ ರಸಗೊಬ್ಬರಗಳು ಪೂರೈಕೆಯಾಗುತ್ತಿದ್ದು, ಚಿಲ್ಲರೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗಳ ಮೂಲಕ ಪ್ರತಿದಿನ ರೈತರಿಗೆ ಪೂರೈಕೆ ಮಾಡಲಾಗುತ್ತಿದೆ. ಯಾವುದೇ ರಸಗೊಬ್ಬರದ ಕೊರತೆ ಇಲ್ಲ, ಹಾಗಾಗಿ ರೈತರು ಯಾವುದೇ ಆತಂಕಕ್ಕೆ ಒಳಗಾಗದೇ ರಸಗೊಬ್ಬರವನ್ನು ನಿಗದಿಪಡಿಸಿದ ದರ ನೀಡಿ ಮತ್ತು ಅಧಿಕೃತ ಬಿಲ್ ಪಡೆದು ಕೊಂಡೊಯ್ಯುವಂತೆ ಸೂಚಿಸಿದ್ದಾರೆ.
ರಸಗೊಬ್ಬರ ರೈತರಿಗೆ ಸಿಗಬೇಕು ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುವವರ ಮತ್ತು ಕೃತಕ ಅಭಾವ ಸೃಷ್ಟಿಸುವ ಪರಿಕರ ಮಾರಾಟ ಮಳಿಗೆಗಳ ಪರವಾನಗಿಯನ್ನು ರದ್ದು ಮಾಡಿ ಸೂಕ್ತ ಕಾನೂನತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.