

ಬೆಂಗಳೂರು: ಮನೆಗಳವು ಮಾಡಲು ಸಜ್ಜೆ ಮೂಲಕ 2ನೇ ಮಹಡಿಗೆ ತೆರಳಿದ್ದ ಕಳ್ಳ ಅಲ್ಲಿಂದ ಮುಂದಕ್ಕೂ ಹೋಗಲಾಗದೆ ಹಿಂದಕ್ಕೂ ಬರಲಾಗದೆ ಸಿಲುಕಿಕೊಂಡು ಮನೆ ಮಾಲೀಕನಿಗೆ ಸಿಕ್ಕಿಬಿದ್ದಿದ್ದಾನೆ.
ಪುಟ್ಟೇನಹಳ್ಳಿಯಲ್ಲಿ ವಾಸವಿರುವ ಉತ್ತರ ಭಾರತದ ಸುಹಾಂತ್ (26) ಸಿಕ್ಕಿಬಿದ್ದ ಕಳ್ಳ. ಶನಿವಾರ (ಫೆ.22) ಬೆಳಗ್ಗೆ 6 ಗಂಟೆಯಲ್ಲಿ ಪುಟ್ಟೇನಹಳ್ಳಿಯಲ್ಲಿ ಈ ಕಳ್ಳತನಕ್ಕೆ ಯತ್ನ ನಡೆದಿದೆ. ತಾನು ಕಳ್ಳತನಕ್ಕೆ ಹೋಗಿರಲಿಲ್ಲ. ಕುಡಿದ ನಶೆಯಲ್ಲಿ ಕಟ್ಟಡ ಏರಿದ್ದಾಗಿ ವಿಚಾರಣೆ ವೇಳೆ ಆತ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಟ್ಟೇನಹಳ್ಳಿ 24ನೇ ಮುಖ್ಯರಸ್ತೆಯ ನಾರಾಯಣ ಶಾಲೆ ಬಳಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಸುಹಾಂತ್ ಅಲ್ಲಿ ಕೆಲಸ ಮಾಡುತ್ತಿದ್ದ. ಶನಿವಾರ ಬೆಳಗ್ಗೆ ಕುಡಿದು ಅದೇ ಪ್ರದೇಶದಲ್ಲಿದ್ದ ಎರಡು ಅಂತಸ್ತಿನ ಮನೆಯ ಬಳಿ ಬಂದಿದ್ದ. ಮನೆಯ ಹಿಂಭಾಗದ ಗೋಡೆಯ ಗ್ರಿಲ್ ಮೂಲಕ ಎರಡನೇ ಅಂತಸ್ತಿನಲ್ಲಿರುವ ಕಿಟಕಿಯ ಬಳಿ ಬಂದಿದ್ದ.
ಅಲ್ಲಿಂದ ಮುಂದಕ್ಕೆ ಹೋಗಲಾಗದೆ ಕೆಳಕ್ಕೂ ಇಳಿಯಲಾಗದೆ ಪೇಚಿಗೆ ಸಿಲುಕಿದ್ದ. ಭಯಗೊಂಡ ಆತ ಜೋರಾಗಿ ಕಿರುಚಲು ಆರಂಭಿಸಿದ್ದ. ಸುಹಾಂತ್ ಬೊಬ್ಬೆ ಕೇಳಿ ಮನೆ ಮಾಲೀಕ ಎಚ್ಚರಗೊಂಡಿದ್ದರು. ಅಪರಿಚಿತ ವ್ಯಕ್ತಿಯೊಬ್ಬ ಕಿಟಕಿ ಸರಳು ಹಿಡಿದುಕೊಂಡು ಕೂಗುತ್ತಿರುವುದು ಕಂಡು, ಆತ ಕಳ್ಳನಿರಬಹುದೆಂದು ಮನೆ ಮಂದಿ ಆತಂಕಕ್ಕೊಳಗಾಗಿದ್ದರು. ಆತನನ್ನು ಪ್ರಶ್ನಿಸಿದಾಗ ಯಾರೋ ಹಿಂಬಾಲಿಸಿಕೊಂಡು ಬಂದರು. ಭಯಗೊಂಡು ಕಿಟಕಿ ಹತ್ತಿದ್ದೇನೆ ಎಂದು ಹೇಳಿದ್ದ.
ಆತ ಆಯತಪ್ಪಿ ಕೆಳಗೆ ಬೀಳಬಹುದೆಂದು ಮನೆ ಮಂದಿ ಆತನ ಕೈಗಳನ್ನು ಹಗ್ಗದಿಂದ ಕಿಟಕಿಗೆ ಕಟ್ಟಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಜತೆ ಸ್ಥಳಕ್ಕೆ ಬಂದ ಪುಟ್ಟೇನಹಳ್ಳಿ ಪೊಲೀಸರು ಆತನಿಗೆ ಹಗ್ಗ ಕಟ್ಟಿ ಏಣಿ ಮೂಲಕ ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಬಳಿಕ ಸುಹಾಂತ್ ಸಿಕ್ಕಿ ಹಾಕಿಕೊಂಡ ಮನೆ ಹಾಗೂ ಅಕ್ಕಪಕ್ಕದ ಮನೆಯವರು ತಮ್ಮ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಪರಿಶೀಲಿಸಿ ಎಲ್ಲವೂ ಸುರಕ್ಷಿತವಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಕಳ್ಳನಲ್ಲ, ಕುಡುಕ ಕಟ್ಟಡ ಕಾರ್ವಿುಕ
ಸುಹಾಂತ್ನನ್ನು ಮೊದಲು ಕಳ್ಳನೆಂದೇ ಭಾವಿಸಲಾಗಿತ್ತು. ಆದರೆ, ತನಿಖೆ ನಡೆಸಿದಾಗ ಆತ ಕಳ್ಳನಲ್ಲ ಎಂಬುದು ಗೊತ್ತಾಗಿದೆ. ಕಟ್ಟಡ ಕಾರ್ವಿುಕನಾಗಿದ್ದ ಹಿನ್ನೆಲೆಯಲ್ಲಿ ಈತ ಸಲೀಸಾಗಿ ಕಟ್ಟಡ ಏರುತ್ತಿದ್ದ. ಆದರೆ, ಮನೆಯ ಎರಡನೇ ಅಂತಸ್ತಿನಲ್ಲಿರುವ ಕಿಟಕಿ ಏರಿದ ಬಳಿಕ ಕುಡಿದ ನಶೆ ಇಳಿದು ಸಹಾಯಕ್ಕಾಗಿ ಕೂಗಿಕೊಂಡಿದ್ದ ಎಂದು ಪೊಲೀಸರು ಹೇಳುತ್ತಿದ್ದಾರೆ.