

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಅಧ್ಯಕ್ಷರಾಗಿ ಮಾಜಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.
ಪ್ರೀತಿ ಸುಡಾನ್ ಅಧಿಕಾರಾವಧಿ ಏಪ್ರಿಲ್ 29ರಂದು ಪೂರ್ಣಗೊಂಡ ಬಳಿಕ ಇದೀಗ ಅಜಯ್ ಕುಮಾರ್ ಅಧ್ಯಕ್ಷರಾಗಿದ್ದು, ಆಯೋಗದ ಹಿರಿಯ ಸದಸ್ಯ ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಜ್ ಶುಕ್ಲಾ ಪ್ರಮಾಣ ವಚನ ಬೋಧಿಸಿದರು. ಭಾರತೀಯ ಆಡಳಿತ ಸೇವೆ ಭಾರತೀಯ ವಿದೇಶಾಂಗ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದಂತೆ ಇತರ ಹುದ್ದೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸುತ್ತದೆ. ಆಯೋಗದಲ್ಲಿ ಅಧ್ಯಕ್ಷರ ಜೊತೆಗೆ, ಗರಿಷ್ಠ 10 ಸದಸ್ಯರನ್ನು ಹೊಂದಿರಬಹುದಾಗಿದ್ದು, ಪ್ರಸ್ತುತ ಆಯೋಗದಲ್ಲಿ 2 ಸದಸ್ಯ ಹುದ್ದೆಗಳು ಖಾಲಿ ಉಳಿದಿವೆ. ಅಜಯ್ ಕುಮಾರ್ 1985ನೇ ಬ್ಯಾಚ್ನ ಕೇರಳ ಕೇಡರ್ನ ಮಾಜಿ ಐಎಎಸ್ ಅಧಿಕಾರಿಯಾಗಿದ್ದು, 35 ವರ್ಷಗಳಿಗೂ ಅಧಿಕ ವೃತ್ತಿಜೀವನದಲ್ಲಿ, ಕೇರಳ ಮತ್ತು ಕೇಂದ್ರದಲ್ಲಿ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.